ಐಸಿಸಿಯಿಂದ ಬ್ರಿಯಾನ್ ವಿಟೊರಿಗೆ 3ನೇ ಬಾರಿ ನಿಷೇಧ
ಹರಾರೆ, ಮಾ.8: ಶಂಕಾಸ್ಪದ ಬೌಲಿಂಗ್ ಶೈಲಿಗೆ ಸಂಬಂಧಿಸಿ ಐಸಿಸಿ ಝಿಂಬಾಬ್ವೆ ವೇಗದ ಬೌಲರ್ ಬ್ರಿಯಾನ್ ವಿಟೋರಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬೌಲಿಂಗ್ ಮಾಡದಂತೆ ಮೂರನೇ ಬಾರಿ ನಿಷೇಧಿಸಿದೆ. ವಿಟೋರಿ ಈ ಹಿಂದೆ 2016ರಲ್ಲಿ ಎರಡು ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಷೇಧಿಸಲ್ಪಟ್ಟಿದ್ದರು. ಈಗ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಝಿಂಬಾಬ್ವೆಯ ವಿಟೋರಿ ಬೌಲಿಂಗ್ ಶೈಲಿಯ ಬಗ್ಗೆ ಪಂದ್ಯದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿ ವರದಿ ಸಲ್ಲಿಸಿದ್ದರು. ವಿಟೋರಿಗೆ ನಿಷೇಧ ಹೇರಲಾಗಿದೆ ಎಂದು ಗುರುವಾರ ಐಸಿಸಿ ಪ್ರಕಟಿಸಿದೆ. ವಿಟೋರಿ 24 ಏಕದಿನ, 11 ಟ್ವೆಂಟಿ-20 ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2016ರ ಜನವರಿಯಲ್ಲಿ ಮೊದಲ ಬಾರಿ ನಿಷೇಧಕ್ಕೆ ಒಳಗಾಗಿದ್ದರು. ಜೂ.2016ರಲ್ಲಿ ಮತ್ತೆ ಬೌಲಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಅದೇ ವರ್ಷ ನವೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ವೇಳೆ ಬೌಲಿಂಗ್ ಶೈಲಿಯ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆಗ ಅವರಿಗೆ 12 ತಿಂಗಳ ಕಾಲ ನಿಷೇಧ ಹೇರಲಾಗಿತ್ತು.