ಕೊರಿಯಾ ವಿರುದ್ಧ ಸೋತ ಭಾರತ

Update: 2018-03-08 18:16 GMT

ಸಿಯೋಲ್, ಮಾ.8: ಭಾರತದ ಮಹಿಳಾ ಹಾಕಿ ತಂಡ ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಮೊದಲ ಸೋಲು ಕಂಡಿದೆ. ಗುರುವಾರ ನಡೆದ ಮೂರನೇ ಪಂದ್ಯದಲ್ಲಿ ಆತಿಥೇಯ ತಂಡದ ವಿರುದ್ಧ 1-2 ಗೋಲುಗಳ ಅಂತರದಿಂದ ಸೋತಿದೆ.

ಇಲ್ಲಿನ ಜಿನ್‌ಚುನ್ ನ್ಯಾಶನಲ್ ಅಥ್ಲೆಟಿಕ್ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸಿಯೊಲ್ ಕಿ ಚೆಯೊನ್(12ನೇ ನಿಮಿಷ) ಹಾಗೂ ಯುರಿಮ್ ಲೀ(14ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತದ ಪರ ಲಾಲ್‌ರೆಮ್ಸಿಯಾಮಿ 16ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿ ಮರು ಹೋರಾಟ ನೀಡಿದರೂ ತಂಡದ ಗೆಲುವಿಗೆ ಇದು ಸಾಕಾಗಲಿಲ್ಲ.

ದಕ್ಷಿಣ ಕೊರಿಯಾ ಗೆಲುವು ಸಾಧಿಸಿದ ಹೊರತಾಗಿಯೂ ಭಾರತ ಐದು ಪಂದ್ಯಗಳ ಹಾಕಿ ಸರಣಿಯಲ್ಲಿ ಈಗಲೂ 2-1 ಮುನ್ನಡೆಯಲ್ಲಿದೆ.

ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ ಗೆಲುವಿನ ಓಟವನ್ನು ಮುಂದುವರಿಸುವ ವಿಶ್ವಾಸದೊಂದಿಗೆ ಮೂರನೇ ಪಂದ್ಯ ಆಡಲು ಮೈದಾನಕ್ಕೆ ಇಳಿದಿತ್ತು. ಮೊದಲ 10 ನಿಮಿಷಗಳ ಆಟದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿಯಿತ್ತು. 12ನೇ ನಿಮಿಷದಲ್ಲಿ ಸಿಯೊಲ್ ಕಿ ಚೆಯೊನ್ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿ ಕೊರಿಯಾಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

14ನೇ ನಿಮಿಷದಲ್ಲಿ ಗೋಲು ಬಾರಿಸಿದ ಯುರಿಮ್ ಕೊರಿಯಾ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಮರು ಹೋರಾಟ ನಡೆಸಿತು. 16ನೇ ನಿಮಿಷದಲ್ಲಿ ಲಾಲ್‌ರೆಮ್ಸಿಯಾಮಿ ಗೋಲು ಬಾರಿಸಿದರು. ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತೀಯ ತಂಡ ಸಮಬಲ ಸಾಧಿಸುವತ್ತ ಹೆಜ್ಜೆ ಇಟ್ಟಿತ್ತು. ದಕ್ಷಿಣ ಕೊರಿಯಾದ ಗೋಲ್‌ಕೀಪರ್ ಹೀಬಿನ್ ಜುಂಗ್ ಭಾರತಕ್ಕೆ ಹಲವು ಅವಕಾಶವನ್ನು ನಿರಾಕರಿಸಿದರು.

  ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲಿಗಾಗಿ ಹೋರಾಟ ಮುಂದುವರಿಸಿದವು. ದಕ್ಷಿಣ ಕೊರಿಯಾ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ, ಇದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು. ಕೊನೆಯ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಗೋಲು ಗಳಿಸುವ ಅವಕಾಶ ಸೃಷ್ಟಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿತ್ತು. 2-2 ರಿಂದ ಸಮಬಲ ಸಾಧಿಸಿದ್ದರೆ ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಅಜೇಯ ಗೆಲುವಿನ ದಾಖಲೆ ಮುಂದುವರಿಸಬಹುದಿತ್ತು. ಭಾರತ ಪಂದ್ಯದಲ್ಲಿ ಮತ್ತೊಂದು ಗೋಲು ಬಾರಿಸಲು ತೀವ್ರ ಪ್ರಯತ್ನ ನಡೆಸಿತು. ಭಾರತ ಪಂದ್ಯದ ಕೊನೆಯ 4 ನಿಮಿಷದಲ್ಲಿ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಎರಡು ಬಾರಿ ಭಾರತಕ್ಕೆ ಗೋಲು ನಿರಾಕರಿಸಿದ ದಕ್ಷಿಣ ಕೊರಿಯಾದ ಗೋಲ್‌ಕೀಪರ್ ಹೀಬಿನ್ ಜಂಗ್ 2-1 ಅಂತರದ ಗೆಲುವಿನ ಶ್ರೇಯಸ್ಸಿಗೆ ಪಾತ್ರರಾದರು. ಭಾರತದ ಮಹಿಳಾ ಹಾಕಿ ತಂಡ ಶುಕ್ರವಾರ ದಕ್ಷಿಣ ಕೊರಿಯಾ ವಿರುದ್ದ ನಾಲ್ಕನೇ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News