ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಪಿಂದರ್ ಸಿಂಗ್ ಅರ್ಹತೆ
ಹೊಸದಿಲ್ಲಿ, ಮಾ.8: ಹರ್ಯಾಣದ ತ್ರಿಪಲ್ ಜಂಪ್‌ಪಟು ಅರ್ಪಿಂದರ್ ಸಿಂಗ್ ಹಾಗೂ ತಮಿಳುನಾಡಿನ 400 ಮೀ. ಹರ್ಡಲ್ಸ್ ಪಟು ಧರುನ್ ಅಯ್ಯಸಾಮಿ ಎಪ್ರಿಲ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇಲ್ಲಿ ಗುರುವಾರ ನಡೆದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಟೂರ್ನಿಯ ಕೊನೆಯ ದಿನ ಸಿಂಗ್ ಹಾಗೂ ಅಯ್ಯಸಾಮಿ ಈ ಸಾಧನೆ ಮಾಡಿದರು. ಎ.4 ರಿಂದ ಗೋಲ್ಡ್ ಕೋಸ್ಟ್‌ನಲ್ಲಿ ಆರಂಭವಾಗಲಿರುವ ಸಿಡಬ್ಲುಜಿಗೆ 9 ಮಂದಿ ಟ್ರಾಕ್ ಹಾಗೂ ಫೀಲ್ಡ್ ಅಥ್ಲೀಟ್‌ಗಳು ಅರ್ಹತೆ ಪಡೆದಿದ್ದಾರೆ.
ಹರ್ಡಲ್ಸ್‌ನಲ್ಲಿ 49.45 ಸೆಕೆಂಡ್‌ನಲ್ಲಿ ಗುರಿ ತಲುಪಿದ ಅಯ್ಯಸಾಮಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. 2007ರಲ್ಲಿ ಜಪಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜೋಸೆಫ್ ಅಬ್ರಹಾಮ್ ನಿರ್ಮಿಸಿದ್ದ 11 ವರ್ಷಗಳ ಹಳೆಯ ದಾಖಲೆ(49.51 ಸೆ.) ಮುರಿದರು.
ಅರ್ಪಿಂದರ್ ಸಿಂಗ್ 16.61 ಮೀ.ದೂರ ಜಿಗಿದು ಟ್ರಿಪಲ್ ಜಂಪ್‌ನಲ್ಲಿ ಜಯಶಾಲಿಯಾದರು. ಕಾಮನ್‌ವೆಲ್ತ್ ಗೇಮ್ಸ್ ಅರ್ಹತಾ ಮಾನದಂಡ(16.60 ಮೀ.)ಕ್ರಮಿಸಿದರು.
100 ಮೀ. ಹರ್ಡಲ್ಸ್‌ನಲ್ಲಿ ಸಿದ್ದಾಂತ ತಿಂಗಳಾಯ 13.76 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಆದರೆ ಕಾಮನ್‌ವೆಲ್ತ್ ಗೇಮ್ಸ್‌ನ ಅರ್ಹತಾ ಮಾರ್ಕ್(13.55 ಸೆ.) ತಲುಪಲು ವಿಫಲರಾದರು. ಒಲಿಂಪಿಯನ್ ಸುಧಾ ಸಿಂಗ್ 3000 ಮೀ. ಸ್ಟೀಪಲ್ ಚೇಸ್‌ನ್ನು 9 ನಿಮಿಷ, 50.38 ಸೆಕೆಂಡ್‌ನಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಆದರೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅರ್ಹತೆ ಪಡೆಯಲು ವಿಫಲರಾದರು.