25,000 ರೈತರಿಂದ 180 ಕಿ.ಮೀ. ಕಾಲ್ನಡಿಗೆ ಜಾಥಾ
ಥಾಣೆ,ಮಾ.9: ತಮ್ಮ ಸಾಲಗಳನ್ನು ಮನ್ನಾ ಮಾಡುವ ಬೇಡಿಕೆಯೊಂದಿಗೆ ಮುಂಬೈಗೆ ಜಾಥಾ ಕೈಗೊಂಡಿರುವ ಸುಮಾರು 25,000 ರೈತರು ಶುಕ್ರವಾರ ಥಾಣೆಯನ್ನು ತಲುಪಿದ್ದಾರೆ. ಸೋಮವಾರ ಮುಂಬೈನಲ್ಲಿ ವಿಧಾನಸಭೆಗೆ ಮುತ್ತಿಗೆ ಹಾಕಲು ಪ್ರಯತ್ನಿಸುವ ಮೂಲಕ ಅವರು ರಾಜ್ಯ ಸರಕಾರದ ರೈತವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಹೆಚ್ಚಿನ ರೈತರು ಕೆಂಪು ಅಂಗಿ ಮತ್ತು ಕೆಂಪು ಟೋಪಿಗಳನ್ನು ಧರಿಸಿದ್ದು, ಕುಡುಗೋಲು ಮತ್ತು ಸುತ್ತಿಗೆಯ ಚಿತ್ರವಿರುವ ಧ್ವಜಗಳನ್ನು ಹಿಡಿದು ಸಾಗುತ್ತಿದ್ದಾರೆ. ಮಂಗಳವಾರ ನಾಸಿಕ್‌ನಿಂದ 180 ಕಿ.ಮೀ.ದೂರದ ಮುಂಬೈಗೆ ತಮ್ಮ ಕಾಲ್ನಡಿಗೆ ಜಾಥಾ ಆರಂಭಿಸಿರುವ ಈ ರೈತರು ಪ್ರತಿದಿನ ಸುಮಾರು 30 ಕಿ.ಮೀ.ಗಳನ್ನು ಕ್ರಮಿಸುತ್ತಿದ್ದಾರೆ.
ಸಂಪೂರ್ಣ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಸಮಿತಿಯ ವರದಿಯ ಜಾರಿ ಅವರ ಮುಖ್ಯ ಬೇಡಿಕೆಗಳಾಗಿವೆ.
ರೈತರ ನಿರಂತರ ಪ್ರತಿಭಟನೆಗಳಿಂದಾಗಿ ಮಹಾರಾಷ್ಟ್ರ ಸರಕಾರವು ಒತ್ತಡದಲ್ಲಿ ಸಿಲುಕಿದೆ. ಸರಕಾರವು ತಮಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎನ್ನುವುದು ರೈತರ ಆರೋಪವಾಗಿದೆ. ಸರಕಾರವು ಕಳೆದ ವರ್ಷದ ಜೂನ್‌ನಲ್ಲಿ 34,000 ಕೋ.ರೂ.ಗಳ ಶರ್ತುಬದ್ಧ ಸಾಲಮನ್ನಾವನ್ನು ಪ್ರಕಟಿಸಿತ್ತು.
ಕಳೆದ ವರ್ಷದ ಜೂನ್‌ನಿಂದೀಚಿಗೆ 1,753 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಾಥಾವನ್ನು ಸಂಘಟಿಸಿರುವ ಅಖಿಲ ಭಾರತ ಕಿಸಾನ್ ಸಭಾ ಹೇಳಿದೆ.
ಕೀಟಗಳಿಂದ ಹತ್ತಿಬೆಳೆಗೆ ಹಾನಿ ಮತ್ತು ಆಲಿಕಲ್ಲು ಹಾಗೂ ಅಕಾಲ ಮಳೆಯಿಂದಾಗಿ ಪೈರುನಷ್ಟಕ್ಕೆ ಪರಿಹಾರವಾಗಿ 2,400 ಕೋ.ರೂ.ಗಳ ಆರ್ಥಿಕ ನೆರವು ಕೋರಿ ಮಹಾರಾಷ್ಟ್ರ ಸರಕಾರವು ಕೇಂದ್ರಕ್ಕೆ ಅವಹಾಲು ಸಲ್ಲಿಸಿದೆ ಎಂದು ಕೃಷಿ ಸಚಿವ ಪಾಂಡುರಂಗ ಫಂಡ್ಕರ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಆದರೆ ಕೇಂದ್ರದಿಂದ ಈವರೆಗೆ ಯಾವುದೇ ಹಣಕಾಸು ಬಿಡುಗಡೆಯಾಗಿಲ್ಲ.
ಬುಡಕಟ್ಟು ಗ್ರಾಮಗಳು ಮುಳುಗುವುದನ್ನು ತಡೆಯಲು ನಾಸಿಕ್, ಥಾಣೆ ಮತ್ತು ಪಾಲ್ಘರ್‌ಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ನದಿ ಜೋಡಣೆ ಯೋಜನೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ಮಾಡಬೇಕು ಎಂದೂ ರೈತರು ಒತ್ತಾಯಿಸುತ್ತಿದ್ದಾರೆ.