8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯರು
ಹೈದರಾಬಾದ್, ಮಾ.9: 10ನೇ ತರಗತಿಯಲ್ಲಿ ಕಲಿಯುವ ಇಬ್ಬರು ವಿದ್ಯಾರ್ಥಿನಿಯರು ಕಟ್ಟಡದ ಎಂಟನೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಹೈದರಾಬಾದ್‌ನ ಸರೂರ್‌ನಗರ್‌ನಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲವಾದರೂ ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆ ತೋರುವ ಒತ್ತಡವೇ ವಿದ್ಯಾರ್ಥಿನಿಯರು ಬದುಕು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಬೈರಮಲ್ಗುಡದ ಅಕ್ಷರ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿಯರಾದ ಕಾಲೆ ಸ್ರವಣಿ ಮತ್ತು ಭಾರ್ಗವಿ ಪಟೇಲ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇವರು 10ನೇ ತರಗತಿ ಸಿಬಿಎಸ್‌ಇ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಪೊಲೀಸರ ಪ್ರಕಾರ, ಇಮಾರತ್ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿರುವ ಕಾಲೆ ನಾಗೇಂದ್ರ ಅವರ ಪುತ್ರಿಯಾಗಿರುವ ಸ್ರವಣಿ ಸರೂರ್‌ನಗರದ ಚಿತ್ರ ಲೇಔಟ್‌ನ ಮಂಜೀರ ಹಿಲ್ಸ್‌ನಲ್ಲಿರುವ ತನ್ನ ಮನೆಯಿಂದ ಟಿಎನ್‌ಆರ್ ವೈಷ್ಣವಿ ಶಿಖರ ಅಪಾರ್ಟ್‌ಮೆಂಟ್‌ನಲ್ಲಿರುವ ಕಟ್ಟಡ ನಿರ್ಮಾಣ ಸಂಸ್ಥೆಯ ಮಾಲಕ ಶಾಂತಿ ಕುಮಾರ್ ಪಟೇಲ್ ಮಗಳಾದ ಭಾರ್ಗವಿ ಮನೆಗೆ ಓದಲು ತೆರಳಿದ್ದಳು. ಸಂಜೆ 6.30ರ ಸುಮಾರಿಗೆ ಇಬ್ಬರು ಹುಡುಗಿಯರು ಕೂಡಾ ಎಂಟನೇ ಮಹಡಿಯಲ್ಲಿದ್ದ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರ್ಗವಿಯ ಕೋಣೆಯಲ್ಲಿದ್ದ ಕಸದ ಬುಟ್ಟಿಯಲ್ಲಿ ಸ್ರವಣಿ ಬರೆದಿರುವ ಪತ್ರ ಸಿಕ್ಕಿದ್ದು ಅದರಲ್ಲಿ, “ಪ್ರೀತಿಯ ತಂದೆ-ತಾಯಿ ನನ್ನನ್ನು ಕ್ಷಮಿಸಿ. ತೇಜು ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಬರೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಸಿಕ್ಕಿರುವ ಪತ್ರದಿಂದ ಇದು ಆತ್ಮಹತ್ಯೆಯೆಂದು ಕಂಡುಬಂದರೂ ಪೊಲೀಸರು ಸಂಶಯಾಸ್ಪದ ಸಾವು ಎಮದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.