ಸ್ವಾತಂತ್ರ್ಯದ ಮೇಲೆ ಆಕ್ರಮಣ : ಮೋದಿ ವಿರುದ್ಧ ಸೋನಿಯಾ ವಾಗ್ದಾಳಿ
ಮುಂಬೈ, ಮಾ. 9: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಶುಕ್ರವಾರ ಸೋನಿಯಾ ಗಾಂಧಿ ಮೊದಲ ಬಾರಿಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಇಂಡಿಯಾ ಟುಡೆ’ ಸಮಾವೇಶ-2018ರಲ್ಲಿ ಅವರು ಮಾತನಾಡಿದರು.
ಆಡಳಿತಾರೂಢ ಕೇಂದ್ರ ಸರಕಾರ ಪ್ರಚೋದನಕಾರಿ ಹೇಳಿಕ ನೀಡುವ ಮೂಲಕ ಜನರ ಸ್ವಾತಂತ್ರ್ಯದ ಮೇಲೆ ‘‘ವ್ಯವಸ್ಥಿತ ಹಾಗೂ ನಿರಂತರ ಹಲ್ಲೆ’’ ನಡೆಸುತ್ತಿದೆ. ಆದರೆ, ಈ ಪ್ರಚೋದನಕಾರಿ ಹೇಳಿಕೆ ಆಕಸ್ಮಿಕ ಅಥವಾ ಯಾದೃಚ್ಛಿಕ ಅಲ್ಲ. ಇದು ಅಪಾಯಕಾರಿ ವಿನ್ಯಾಸದ ಒಂದು ಭಾಗ ಎಂದು ಅವರು ಹೇಳಿದ್ದಾರೆ. ‘‘ನಾವು ಫಾಸ್ಟ್ (ಎಫ್.ಎ.ಎ.ಟಿ.) ಚಲಿಸಬೇಕಾದ ಅಗತ್ಯತೆ ಇದೆ. ಆದರೆ, ಪಾಸ್ಟ್ ಅಂದರೆ ಮೊದಲು ಕಾರ್ಯಾಚರಿಸು (ಫಸ್ಟ್ ಆ್ಯಕ್ಟ್), ಎರಡನೆಯದಾಗಿ ಚಿಂತಿಸು (ಸೆಕೆಂಡ್ ಥಿಂಕ್) ಅಲ್ಲ’’ ಎಂದು ಅವರು ಹೇಳಿದರು.
ದೇಶದ ಸಂವಿಧಾನ ಬದಲಾಯಿಸುವ ಬಗ್ಗೆ ಕಟು ಹೇಳಿಕೆ ನೀಡಲಾಯಿತು. ಇದು ಭಾರತದ ಸತ್ವವನ್ನು ಕೆಡಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದು ಅವರು ಹೇಳಿದರು. ಸಂಸತ್ತಿನಲ್ಲಿ ಬಹುಮತ ಸಂವಾದ ನಿಗ್ರಹಿಸುವುದಕ್ಕಿರುವ ಪರವಾನಿಗೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಮ್ಮ ಸ್ವಾತಂತ್ರದ ಮೇಲೆ ಹಲ್ಲೆ ನಡೆಯುತ್ತಿದೆ. ನಮ್ಮ ಜನರಲ್ಲಿ ಅಸಹನೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ನೂತನ ಶೈಲಿ ಅಗತ್ಯ
ಸಂಘಟನೆಯ ಮಟ್ಟದಲ್ಲಿ ಜನರನ್ನು ಸಂಪರ್ಕಿಸಲು ನೂತನ ಶೈಲಿಯನ್ನು ಪಕ್ಷ ಅಭಿವೃದ್ಧಿಪಡಿಸಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದರು. “ಪಕ್ಷದ ವಿಚಾರಗಳ ಕುರಿತು ನೀವು ನಿಮ್ಮ ಪುತ್ರ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡುತ್ತೀರಾ” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, “ನಾನು ಸ್ವಯಂಸೇವಕನಾಗದಿರಲು ಪ್ರಯತ್ನಿಸುತ್ತೇನೆ. ಪಕ್ಷವನ್ನು ಪುನಶ್ಚೇತನಗೊಳಿಸಲು ಯುವ ಹಾಗೂ ಹಿರಿಯ ನಾಯಕರ ನಡುವೆ ಸಮತೋಲನ ತರಲು ರಾಹುಲ್ ಬಯಸುತ್ತಿದ್ದಾರೆ” ಎಂದರು.
ಈಶಾನ್ಯ ರಾಜ್ಯಗಳಲ್ಲಿ ಮತ ಎಣಿಕೆ ಸಂದರ್ಭ ರಾಹುಲ್ ಗಾಂಧಿ ದೇಶದಲ್ಲಿ ಇರಲಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ಚುನಾವಣೆ ನಡೆದು ಮೂರು ದಿನಗಳ ಬಳಿಕ ರಾಹುಲ್ ಗಾಂಧಿ ಅಜ್ಜಿಯನ್ನು ಭೇಟಿಯಾಗಲು ಇಟಲಿಗೆ ಹೋದರು ಎಂದರು.