×
Ad

ಅತ್ಯಂತ ಶ್ರೀಮಂತ ಪ್ರಾದೇಶಿಕ ರಾಜಕೀಯ ಪಕ್ಷ ಯಾವುದು ಗೊತ್ತಾ?

Update: 2018-03-09 21:07 IST

ಹೊಸದಿಲ್ಲಿ, ಮಾ.9: ಸಂಪತ್ತಿನ ಲೆಕ್ಕಾಚಾರದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಅತ್ಯಂತ ಶ್ರೀಮಂತ ಪ್ರಾದೇಶಿಕ ಪಕ್ಷವಾಗಿದೆ ಎಂದು ಪ್ರಜಾಸತಾತ್ಮಕ ಸುಧಾರಣೆಗಳ ಸಂಘ (ಎಡಿಆರ್) ದ ವರದಿಯು ತಿಳಿಸಿದೆ.

2015-16ರ ವಿತ್ತೀಯ ವರ್ಷದಲ್ಲಿ ಎಸ್‌ಪಿ 634.96 ಕೋಟಿ ರೂ. ಆಸ್ತಿಯನ್ನು ಘೋಷಿಸಿದೆ ಎಂದು ವರದಿ ತಿಳಿಸಿದೆ. ಈ ಪಟ್ಟಿಯಲ್ಲಿ ತಮಿಳುನಾಡಿನ ಡಿಎಂಕೆ ಎರಡನೇ ಸ್ಥಾನದಲ್ಲಿದ್ದು, 257.18 ಕೋಟಿ ರೂ. ಆಸ್ತಿ ಘೋಷಿಸಿದೆ ಮತ್ತು ಎಐಎಡಿಎಂಕೆ 224.84 ಕೋಟಿ ರೂ. ಆಸ್ತಿಯ ಒಡೆತನವನ್ನು ಹೊಂದಿರುವುದಾಗಿ ತಿಳಿಸಿದೆ.

2011-12ರ ವಿತ್ತೀಯ ವರ್ಷದಲ್ಲಿ ಸಮಾಜವಾದಿ ಪಕ್ಷವು 212.86 ಕೋಟಿ ರೂ. ಆಸ್ತಿ ಘೋಷಿಸಿತ್ತು. ಈ ಪ್ರಮಾಣವು 2015-16ರ ಹೊತ್ತಿಗೆ 198% ಏರಿಕೆ ಕಂಡಿದೆ. ಇದೇ ವೇಳೆ ಎಐಎಡಿಎಂಕೆಯ ಆಸ್ತಿಯು 155% ಏರಿಕೆ ಕಂಡು 2011-12ರ 88..21 ಕೋಟಿ ರೂ. ನಿಂದ 224.84 ಕೋಟಿ ರೂ.ಗೆ ತಲುಪಿದೆ ಎಂದು ವರದಿ ತಿಳಿಸಿದೆ.

ಪ್ರಾದೇಶಿಕ ಪಕ್ಷಗಳು ಘೋಷಿಸುವ ಆಸ್ತಿಗಳು ಸ್ಥಿರಾಸ್ತಿಗಳು, ಸಾಲಗಳು ಮತ್ತು ಮುಂಗಡ ಪಾವತಿಗಳು, ಠೇವಣಿಗಳು, ಟಿಡಿಎಸ್, ಹೂಡಿಕೆಗಳು ಹಾಗೂ ಇತರ ಆಸ್ತಿಗಳು ಎಂಬ ಆರು ವಿಭಾಗಗಳಲ್ಲಿ ಬರುತ್ತವೆ. 2011-12 ಸಾಲಿನಲ್ಲಿ ಪ್ರಾದೇಶಿಕ ಪಕ್ಷಗಳು ಠೇವಣಿ ವಿಭಾಗದಲ್ಲಿ ಗರಿಷ್ಠ ಪ್ರಮಾಣದ ಆಸ್ತಿಯನ್ನು, 331.54 ಕೋಟಿ ರೂ. ಅಂದರೆ ಒಟ್ಟಾರೆ ಆಸ್ತಿಯ 68.77% ಘೋಷಿಸಿದ್ದವು. ಈ ಪ್ರಮಾಣವು 2015-16 ವೇಳೆಗೆ 80.19% ತಲುಪಿ 1054.80 ಕೋಟಿ ರೂ. ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವೈಆರ್‌ಆರ್ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಈ ಪಟ್ಟಿಯಲ್ಲಿ ಹೆಸರಿಸಲಾಗಿರುವ ಹೊಸ ಪ್ರಾದೇಶಿಕ ಪಕ್ಷಗಳಾಗಿವೆ. ಭಾದ್ಯತೆಯ ವಿಷಯದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಅಗ್ರಸ್ಥಾನಿಗಳಾಗಿವೆ. 2015-16ನೇ ಸಾಲಿನಲ್ಲಿ ತನ್ನ ಭಾದ್ಯತೆಗಳನ್ನು ಕಡಿಮೆ ಮಾಡುವ ಮೂಲಕ ಶಿವಸೇನೆ ಉತ್ತಮ ಬೆಳವಣಿಗೆಯನ್ನು ತೋರಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News