ಸೆಲ್ಫಿ ತೆಗೆಯುವಾಗ ಸಿಡಿದ ಗುಂಡು; ಯುವತಿ ಸಾವು
Update: 2018-03-09 21:11 IST
ಮುಂಬೈ, ಮಾ. 9: ಹದಿನೇಳು ವರ್ಷದ ಬಾಲಕ ಸೆಲ್ಫಿ ತೆಗೆಯುತ್ತಿದ್ದಾಗ ಕೈಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಆಕಸ್ಮಿಕವಾಗಿ ಸಿಡಿದು ಸೋದರ ಸಂಬಂಧಿ ಮೃತಪಟ್ಟ ಘಟನೆ ದಕ್ಷಿಣ ದಿಲ್ಲಿಯ ಸರಿತಾ ವಿಹಾರದಲ್ಲಿ ಗುರುವಾರ ಸಂಜೆ ನಡೆದಿದೆ.
ಬಾಲಕನ ಸೋದರ ಸಂಬಂಧಿಯಾದ ಶಾಲಾ ಅಧ್ಯಾಪಕಿ ಬಾಲಕ ಹಾಗೂ ಆತನ ಮನೆಯವರನ್ನು ಭೇಟಿಯಾಗಲು ಬಂದಿದ್ದರು. ಈ ಸಂದರ್ಭ ಬಾಲಕ ಪಿಸ್ತೂಲು ಹಿಡಿದುಕೊಂಡು ಸೋದರ ಸಂಬಂಧಿಯೊಂದಿಗೆ ಸೆಲ್ಫಿ ತೆಗೆಯಲು ನಿರ್ಧರಿಸಿದ್ದ. ಈ ಸಂದರ್ಭ ಪಿಸ್ತೂಲಿನಲ್ಲಿದ್ದ ಗುಂಡು ಸಿಡಿದಿದೆ.
ಘಟನೆಗೆ ಸಂಬಂಧಿಸಿ ಬಾಲಕನನ್ನು ಬಂಧಿಸಲಾಗಿದೆ. ಸರಿತಾ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ (ಆಗ್ನೇಯ) ಚಿನ್ಮಯಿ ಬಿಸ್ವಾಸ್ ಹೇಳಿದ್ದಾರೆ.
ಈ ಪಿಸ್ತೂಲು ಬಾಲಕನ ತಂದೆಗೆ ಸೇರಿದ್ದು. ಅವರು ಭೂ ವ್ಯವಹಾರಗಾರರು. ಬಾಲಕ ಪಿಸ್ತೂಲು ಬಳಸಲು ಅವಕಾಶ ನೀಡಿದ ತಂದೆಯ ವಿರುದ್ಧ ನಾವು ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಬಿಸ್ವಾಸ್ ಹೇಳಿದ್ದಾರೆ.