ಗೋಶಾಲೆಗೆ ನಿಧಿ ಸಂಗ್ರಹಿಸಲು ಸಾರಾಯಿ ಮೇಲೆ ತೆರಿಗೆ ವಿಧಿಸಲಿರುವ ರಾಜ್ಯ ಯಾವುದು ಗೊತ್ತಾ ?

Update: 2018-03-09 16:20 GMT

ಶಿಮ್ಲ, ಮಾ.9: ರಾಜ್ಯದಲ್ಲಿರುವ ಗೋಶಾಲೆಗಳ ನಿರ್ವಹಣೆಗೆ ಅಗತ್ಯವಿರುವ ನಿಧಿ ಸಂಗ್ರಹಿಸಲು ಸಾರಾಯಿ ಮೇರೆ ಉಪತೆರಿಗೆ ವಿಧಿಸಲಾಗುವುದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕುರ್ ತಿಳಿಸಿದ್ದಾರೆ.

ಅಲ್ಲದೆ ಹಿ.ಪ್ರದೇಶ ಧಾರ್ಮಿಕ ದತ್ತಿ ಮತ್ತು ದೇವಸ್ಥಾನ ಟ್ರಸ್ಟ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇವಸ್ಥಾನಗಳಿಗೆ ಬರುವ ಕಾಣಿಕೆಯ ಶೇ.15ರಷ್ಟನ್ನು ಗೋಶಾಲೆಗೆ ಬಳಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಮ್ಮ ಪ್ರಥಮ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ತಿಳಿಸಿದರು. ಸಾರಾಯಿ ಬಾಟಲಿಗಳ ಮೇಲೆ 1 ರೂ. ಉಪತೆರಿಗೆ ವಿಧಿಸಿ ಅದನ್ನು ಗೋಶಾಲೆಗೆ ವಿನಿಯೋಗಿಸಲಾಗುವುದು ಎಂದ ಅವರು, ಜಿಲ್ಲೆಗಳ ಸಾಧನೆ ಆಧರಿಸಿ ‘ಆಡಳಿತ ಸೂಚ್ಯಾಂಕಪಟ್ಟಿ’ಯನ್ನು ರಚಿಸಲಾಗುವುದು ಎಂದು ಹೇಳಿದರು.

 ಈ ಹಿಂದಿನ ಕಾಂಗ್ರೆಸ್ ಸರಕಾರ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದೆ. 2007ರಲ್ಲಿ ರಾಜ್ಯ ಸರಕಾರದ ಸಾಲದ ಮೊತ್ತ 19,977 ಕೋಟಿ ರೂ. ಆಗಿದ್ದರೆ 2012ರಲ್ಲಿ , ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭ 27,598 ಕೋಟಿ ರೂ.ಗೆ ಹೆಚ್ಚಿತ್ತು. ಅಲ್ಲದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿತ್ತು ಎಂದು ಠಾಕುರ್ ಆರೋಪಿಸಿದರು.

  ಮುಖ್ಯಮಂತ್ರಿ ತಮ್ಮ ಬಜೆಟ್ ಭಾಷಣದಲ್ಲಿ ಕೆಲವು ಹೊಸ ಯೋಜನೆಗಳನ್ನು ಪ್ರಕಟಿಸಿದರು. ಗೃಹಿಣಿ ಸುವಿಧಾ ಯೋಜನೆಯಲ್ಲಿ ಮಹಿಳೆಯರಿಗೆ ಎಲ್‌ಪಿಜಿ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಒದಗಿಸಲಾಗುವುದು. ಆಲಿಕಲ್ಲು ನಿರೋಧಕ ಗನ್‌ಗಳನ್ನು ಅಳವಡಿಸುವ ಮೊತ್ತದಲ್ಲಿ ಶೇ.60ರಷ್ಟು ಸಬ್ಸಿಡಿ, ಕಾಡುಪ್ರಾಣಿಗಳ ಉಪಟಳ ನಿವಾರಣೆಗೆ ಸೋಲಾರ್ ಬೇಲಿ ಅಳವಡಿಸಲು 35 ಕೋಟಿ ರೂ. ವಿನಿಯೋಗ, ಕೃಷಿ ಉತ್ಪನ್ನಗಳ ಮತ್ತು ಜಾನುವಾರುಗಳ ಮಾರಾಟಕ್ಕೆ ಪ್ರೋತ್ಸಾಹ ನೀಡುವ ಮಸೂದೆ ಜಾರಿಗೆ ನಿರ್ಧಾರ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ದಿನಗಳ ಸಂಖ್ಯೆಯನ್ನು 100ರಿಂದ 120ಕ್ಕೆ ಹೆಚ್ಚಿಸಸಲಾಗುವುದು, ಪಂಚಾಯತ್ ಸದಸ್ಯರ ಸ್ಟೈಪೆಂಡ್ ಮೊತ್ತ ಹೆಚ್ಚಿಸುವುದು, ಜಿಲ್ಲಾ ಪರಿಷದ್ ಹಾಗೂ ಪಂಚಾಯತ್ ಸಮಿತಿ ಸದಸ್ಯರಿಗೆ ಅಭಿವೃದ್ಧಿ ಬಜೆಟ್ ನಿಗದಿಗೊಳಿಸಲಾಗುವುದು. ವಿಜ್ಞಾನಗ್ರಾಮಗಳ ಸ್ಥಾಪನೆ, ಸಣ್ಣ ಕೈಗಾರಿಕೆಗಳ ವಿದ್ಯುತ್ ಶುಲ್ಕದ ಮೇಲಿನ ತೆರಿಗೆ ಶೇ.4ರಿಂದ ಶೇ.2ಕ್ಕೆ, ಮಧ್ಯಮ ಕೈಗಾರಿಕೆಗಳ ವಿದ್ಯುತ್ ಶುಲ್ಕದ ಮೇಲಿನ ತೆರಿಗೆ ಶೇ.10ರಿಂದ ಶೇ.7ಕ್ಕೆ ಇಳಿಕೆ. ಸ್ವಾವಲಂಬನ ಯೋಜನೆ ಆರಂಭಿಸುವುದು. ಈ ಹಿಂದಿನ ಕಾಂಗ್ರೆಸ್ ಸರಕಾರ ಆರಂಭಿಸಿರುವ ಕೌಶಲ್ಯಾಭಿವೃದ್ಧಿ ಯೋಜನೆ ಮುಂದುವರಿಕೆಗೆ ನಿರ್ಧಾರ, ಇದಕ್ಕೆ 100 ಕೋಟಿ ರೂ. ನಿಧಿ ಮೀಸಲಿರಿಸಲಾಗುವುದು ಎಂದು ಮುಖ್ಯಮಂತ್ರಿ ಬಜೆಟ್ ಭಾಷಣದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News