ಸಿರಿಯ: 2 ವಾರಗಳಲ್ಲಿ 1,000 ಸಾವು

Update: 2018-03-09 16:45 GMT

 ಲಂಡನ್, ಮಾ. 9: ಸಿರಿಯದ ಬಂಡುಕೋರ ನಿಯಂತ್ರಣದ ಪೂರ್ವ ಘೌಟದಲ್ಲಿ ಕೇವಲ ಎರಡು ವಾರಗಳಲ್ಲಿ 1,000 ಮೃತದೇಹಗಳು ಮತ್ತು 4,800 ಗಾಯಾಳುಗಳನ್ನು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (ಎಂಎಸ್‌ಎಫ್)’ನ ಬೆಂಬಲ ಹೊಂದಿರುವ ಆಸ್ಪತ್ರೆಗಳು ಸ್ವೀಕರಿಸಿರುವುದಾಗಿ ವೈದ್ಯರ ಸಂಘಟನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆದಾಗ್ಯೂ, ಫೆಬ್ರವರಿ 18ರಿಂದ ಮಾರ್ಚ್ 4ರವರೆಗಿನ ಅವಧಿಯ ಈ ಸಾವು ನೋವುಗಳ ಸಂಖ್ಯೆ ಕನಿಷ್ಠವಾಗಿದೆ ಹಾಗೂ ವಾಸ್ತವಿಕ ಸಂಖ್ಯೆ ಹೆಚ್ಚಾಗಿರಬಹುದು ಎಂದು ಅದು ಹೇಳಿದೆ.

ರಾಜಧಾನಿ ಡಮಾಸ್ಕಸ್‌ನ ಉಪನಗರ ಪೂರ್ವ ಘೌಟದಲ್ಲಿ ಎಂಎಸ್‌ಎಫ್ ಸ್ಥಾಪಿಸಿರುವ 20 ವೈದ್ಯಕೀಯ ಸಂಸ್ಥಾಪನೆಗಳ ಪೈಕಿ 15 ಬಾಂಬ್ ದಾಳಿಗಳಲ್ಲಿ ಧ್ವಂಸಗೊಂಡಿದೆ ಎಂದು ವೈದ್ಯರ ಸಂಘಟನೆ ತಿಳಿಸಿದೆ.

‘‘ತಕ್ಷಣ ಯುದ್ಧವಿರಾಮವನ್ನು ಜಾರಿಗೊಳಿಸಬೇಕು ಹಾಗೂ ಮುತ್ತಿಗೆಗೊಳಗಾಗಿರುವ ಪ್ರದೇಶದಲ್ಲಿರುವ ರೋಗಿಗಳು ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಅಲ್ಲಿಗೆ ವೈದ್ಯಕೀಯ ಪರಿಕರಗಳನ್ನು ಸಾಗಿಸಲು ಅವಕಾಶ ನೀಡಬೇಕು ಎಂಬ ತನ್ನ ಕರೆಯನ್ನು ಎಂಎಸ್‌ಎಫ್ ಪುನರುಚ್ಚರಿಸುತ್ತದೆ’’ ಎಂದು ಸಂಘಟನೆ ಹೇಳಿದೆ.

ಮತ್ತೆ 13 ನಾಗರಿಕರ ಸಾವು

ಈ ನಡುವೆ, ಪೂರ್ವ ಘೌಟದ ವಿವಿಧ ಪಟ್ಟಣಗಳ ಮೇಲೆ ಸರಕಾರಿ ಪಡೆಗಳು ಹೊಸದಾಗಿ ನಡೆಸಿದ ವೈಮಾನಿಕ ಬಾಂಬ್ ದಾಳಿಗಳಲ್ಲಿ 13ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಡಮಾಸ್ಕಸ್‌ನ ಉಪನಗರ ಪೂರ್ವ ಘೌಟದಲ್ಲಿ ಯುದ್ಧವಿರಾಮಕ್ಕೆ ಕರೆ ನೀಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿರುವ ನಿರ್ಣಯ ಇನ್ನೂ ಜಾರಿಯಾಗಿಲ್ಲ.

ಯುದ್ಧವಿರಾಮವನ್ನು ಜಾರಿಗೊಳಿಸಲು ನೆರವಾಗುವಂತೆ ಸಿರಿಯದ ಮಿತ್ರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರಿಗೆ ಪದೇ ಪದೇ ಮಾಡಿರುವ ಮನವಿಗಳು ವ್ಯರ್ಥವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News