ಭಾರತ ವಿರುದ್ಧ ಐರ್ಲೆಂಡ್‌ಗೆ ಐತಿಹಾಸಿಕ ಜಯ
ಇಪೋ(ಮಲೇಷ್ಯಾ), ಮಾ.9: ಸುಲ್ತಾನ್ ಅಝ್ಲಾನ್ ಶಾ ಕಪ್‌ನ ಐರ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ 2-3 ಅಂತರದಿಂದ ಸೋಲುಂಡಿದೆ. ಈ ಮೂಲಕ ಪದಕ ಸ್ಪರ್ಧೆಯಿಂದ ಹೊರ ನಡೆದಿದೆ.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ರಮಣ್‌ದೀಪ್ ಸಿಂಗ್(10ನೇ ನಿಮಿಷ) ಹಾಗೂ ಅಮಿತ್ ರೋಹಿದಾಸ್(26ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ಭಾರತಕ್ಕೆ ಆರಂಭದಲ್ಲಿ 2-0 ಮುನ್ನಡೆ ಒದಗಿಸಿಕೊಟ್ಟಿದ್ದರು. ಆರಂಭಿಕ ಹಿನ್ನಡೆಯಿಂದ ಬೇಗನೇ ಚೇತರಿಸಿಕೊಂಡ ಐರ್ಲೆಂಡ್ ತಂಡ ಶೇನ್ ಒ’ಡೊನೊಗ್ಯು(24ನೇ ನಿಮಿಷ), ಸೀನ್ ಮರ್ರೆ(36ನೇ ನಿಮಿಷ) ಹಾಗೂ ಲೀ ಕೋಲ್(42ನೇ ನಿಮಿಷ) ಬಾರಿಸಿದ ತಲಾ ಒಂದು ಗೋಲು ನೆರವಿನಿಂದ 3-2 ಅಂತರದ ರೋಚಕ ಗೆಲುವು ದಾಖಲಿಸಿತು. ಐರ್ಲೆಂಡ್ ತಂಡ ಇದೇ ಮೊದಲ ಬಾರಿ ಭಾರತ ವಿರುದ್ಧ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿತು. ಭಾರತ ಫೈನಲ್ ಸ್ಪರ್ಧೆಯಲ್ಲಿರಬೇಕಾದರೆ ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. 10ನೇ ನಿಮಿಷದಲ್ಲಿ ಗೋಲು ಬಾರಿಸಿದ ರಮಣ್‌ದೀಪ್ ಸಿಂಗ್ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. 24ನೇ ನಿಮಿಷದಲ್ಲಿ ಗೋಲು ಬಾರಿಸಿದ ಶೇನ್, ಐರ್ಲೆಂಡ್ 1-1 ರಿಂದ ಸಮಬಲ ಸಾಧಿಸಲು ನೆರವಾದರು.
ಶೇನ್ ಗೋಲು ಬಾರಿಸಿದ ಎರಡು ನಿಮಿಷ ಕಳೆಯುವಷ್ಟರಲ್ಲಿ ಭಾರತ ಮೂರನೇ ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಅಮಿತ್ ರೋಹಿದಾಸ್ 26ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತ ಮೊದಲಾರ್ಧದ ಅಂತ್ಯಕ್ಕೆ 2-1 ಅಂತರದ ಮುನ್ನಡೆ ಸಾಧಿಸಲು ನೆರವಾದರು.
ಭಾರತದ ರಕ್ಷಣಾಕೋಟೆಯನ್ನು ಭೆೇದಿಸಿದ ಐರ್ಲೆಂಡ್ ಮೂರನೇ ಕ್ವಾರ್ಟರ್‌ನಲ್ಲಿ ಗೋಲು ಬಾರಿಸಿತು.ಭಾರತದ ಗೋಲ್‌ಕೀಪರ್‌ರನ್ನು ವಂಚಿಸಿದ ಸೀನ್ ಮರ್ರೆ 36ನೇ ನಿಮಿಷದಲ್ಲಿ ಗೋಲು ಬಾರಿಸಿ ಐರ್ಲೆಂಡ್ 2-2 ರಿಂದ ಸಮಬಲ ಸಾಧಿಸಲು ನೆರವಾದರು.
ಮೂರನೇ ಕ್ವಾರ್ಟರ್‌ನಲ್ಲಿ ಐರ್ಲೆಂಡ್ ತಂಡ ಎರಡನೇ ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಲೀ ಕೋಲ್ 42ನೇ ನಿಮಿಷದಲ್ಲಿ ಗೋಲು ಬಾರಿಸಿ ಐರ್ಲೆಂಡ್‌ಗೆ 3-2 ಮುನ್ನಡೆ ಒದಗಿಸಿಕೊಟ್ಟರು.
ಭಾರತ ಸಮಬಲ ಸಾಧಿಸಲು ಅಂತಿಮ ಕ್ಷಣದಲ್ಲಿ ತೀವ್ರ ದಾಳಿ ನಡೆಸಿತು. ಆದರೆ, ಐರ್ಲೆಂಡ್ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಯಿತು. ಮೊದಲ ಬಾರಿ ಭಾರತ ವಿರುದ್ಧ ಜಯ ದಾಖಲಿಸಿತು.
ಭಾರತ ಶನಿವಾರ 5-6ನೇ ಸ್ಥಾನಕ್ಕಾಗಿ ನಡೆಯಲಿರುವ ಪ್ಲೇ-ಆಫ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಆ ಪಂದ್ಯದಲ್ಲಿ ಭಾರತ ಸೇಡು ತೀರಿಸಿಕೊಳ್ಳುವ ಸಾಧ್ಯತೆಯಿದೆ.