2019ರ ಏಷ್ಯನ್ ಕಪ್ ಅರ್ಹತಾ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಪ್ರಕಟ
ಹೊಸದಿಲ್ಲಿ, ಮಾ.9: ಮುಂಬರುವ ಕಿರ್ಗಿಝ್ ರಿಪಬ್ಲಿಕ್‌ನಲ್ಲಿ ನಡೆಯಲಿರುವ 2019ರ ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫೈಯರ್ ಪಂದ್ಯಕ್ಕೆ 32 ಸದಸ್ಯರನ್ನು ಒಳಗೊಂಡ ಭಾರತದ ಫುಟ್ಬಾಲ್ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಭಾರತದ ಪರ ಗರಿಷ್ಠ ಪಂದ್ಯಗಳನ್ನು ಆಡಿರುವ ಹಿರಿಯ ಫುಟ್ಬಾಲ್ ಗೋಲ್‌ಕೀಪರ್ ಸುಬ್ರತಾ ಪಾಲ್‌ರನ್ನು ತಂಡದಿಂದ ಕೈಬಿಡ ಲಾಗಿದೆ.
ಹಲವು ಬಾರಿ ನೆಹರೂ ಕಪ್ ವಿಜೇತ ಭಾರತ ತಂಡದ ಸದಸ್ಯರಾಗಿರುವ, ಭಾರತ 2009ರಲ್ಲಿ ಎಎಫ್‌ಸಿ ಚಾಲೆಂಜ್‌ಕಪ್‌ನಲ್ಲಿ ಜಯಶಾಲಿಯಾಗಿ 27 ವರ್ಷಗಳ ಬಳಿಕ ಏಷ್ಯಾಕಪ್‌ಗೆ ಅರ್ಹತೆ ಪಡೆಯಲು ನೆರವಾಗಿದ್ದ 31ರ ಹರೆಯದ ಪಾಲ್ ಇದೀಗ ಭಾರತ ತಂಡಕ್ಕೆ ಆಯ್ಕೆಯಾಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಬಿಶ್‌ಕೆರ್ಕ್‌ನಲ್ಲಿ ಮಾ.27 ರಂದು ನಡೆಯಲಿರುವ ಕಿರ್ಗಿಝ್ ರಿಪಬ್ಲಿಕ್ ವಿರುದ್ಧದ ಪಂದ್ಯಕ್ಕೆ ಮೊದಲು ಮುಂಬೈನಲ್ಲಿ ನಡೆಯಲಿರುವ ಪೂರ್ವಭಾವಿ ಶಿಬಿರದಲ್ಲಿ ಭಾರತದ ಆಟಗಾರರು ಭಾಗವಹಿಸಲಿದ್ದಾರೆ.
ಭಾರತ 2007 ಹಾಗೂ 2009ರಲ್ಲಿ ನೆಹರೂ ಕಪ್, 2008ರಲ್ಲಿ ಎಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ವಿಜಯಿಯಾದಾಗ ಪಾಲ್ ತಂಡದ ಗೋಲ್‌ಕೀಪರ್ ಆಗಿದ್ದರು. ಪಾಲ್ 2011ರಲ್ಲಿ ಕತರ್‌ನಲ್ಲಿ ನಡೆದ ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ ಎಲ್ಲ ಪಂದ್ಯದಲ್ಲಿ ಗೋಲ್‌ಕೀಪಿಂಗ್ ನಡೆಸಿದ್ದರು. ಎಲ್ಲ ಪಂದ್ಯದಲ್ಲಿ ಒಟ್ಟು 35 ಗೋಲುಗಳನ್ನು ತಡೆದಿದ್ದರು. ಕೊರಿಯಾ ವಿರುದ್ಧ ಪಂದ್ಯವೊಂದರಲ್ಲೇ 16 ಗೋಲುಗಳನ್ನು ತಡೆದಿದ್ದರು. ಈ ಪ್ರದರ್ಶನದ ಮೂಲಕ ಎದುರಾಳಿ ಕೋಚ್‌ರಿಂದ ‘ಭಾರತದ ಸ್ಪೈಡರ್ ಮ್ಯಾನ್’ ಎಂದು ಪ್ರಶಂಸಿಸಲ್ಪಟ್ಟಿದ್ದರು. ಪಾಲ್ ವಿದೇಶಿ ಫುಟ್ಬಾಲ್ ಕ್ಲಬ್‌ನೊಂದಿಗೆ ಸಹಿ ಹಾಕಿದ ಭಾರತದ ಮೊದಲ ಗೋಲ್‌ಕೀಪರ್ ಎನಿಸಿಕೊಂಡಿದ್ದರು. 2014ರಲ್ಲಿ ಡೆನ್ಮಾರ್ಕ್‌ನ ಫುಟ್ಬಾಲ್ ಕ್ಲಬ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಕೋಲ್ಕತಾದ ಎರಡು ಪ್ರಮುಖ ಫುಟ್ಬಾಲ್ ಕ್ಲಬ್‌ಗಳಾದ ಮೋಹನ್ ಬಗಾನ್ ಹಾಗೂ ಈಸ್ಟ್ ಬಂಗಾಳವನ್ನು ಪ್ರತಿನಿಧಿಸಿದ್ದರು. ಪುಣೆ ಎಫ್‌ಸಿ ಪರ ದೀರ್ಘ ಸಮಯ ಆಡಿದ್ದರು.
ಭಾರತ ತಂಡ
►ಗೋಲ್‌ಕೀಪರ್‌ಗಳು: ಗುರುಪ್ರೀತ್ ಸಿಂಗ್ ಸಂಧು, ವಿಶಾಲ್ ಕೈಥ್, ಅಮರಿಂದರ್ ಸಿಂಗ್, ರೆಹೆನೇಶ್ ಟಿಪಿ.
►ಡಿಫೆಂಡರ್‌ಗಳು: ಪ್ರೀತಮ್ ಕೊಟಾಲ್, ನಿಶು ಕುಮಾರ್, ಲಾಲ್‌ರುಥರ, ಅನಾಸ್ ಎಡ್ತೊಡಿಕ, ಸಂದೇಶ್ ಜಿಂಗಾನ್, ಸಲಾಮ್ ರಂಜನ್ ಸಿಂಗ್, ಸಾರ್ಥಕ್, ಜೆರ್ರಿ ಲಾಲ್‌ರಿಂಝ್ವಲಾ, ನಾರಾಯಣ್ ದಾಸ್, ಸುಭಾಶೀಶ್ ಬೋಸ್.
►ಮಿಡ್ ಫೀಲ್ಡರ್‌ಗಳು: ಜಾಕಿಚಂದ್ ಸಿಂಗ್, ಉದಾಂತ ಸಿಂಗ್, ಸತ್ಯಸೇನ್ ಸಿಂಗ್, ಧನಪಾಲ್ ಘನೇಶ್, ಅನಿರುದ್ಧ್ ಥಾಪ, ಜರ್ಮನ್‌ಪ್ರೀತ್ ಸಿಂಗ್, ರೌಲಿನ್ ಬೊರ್ಗೆಸ್,ಮುಹಮ್ಮದ್ ರಫೀಕ್, ಕಾವಿನ್ ಲೊಬೊ, ಬಿಕಾಶ್ ಜೈರು, ಹಾಲಿಚರಣ್ ನರ್ಝರಿ.
►ಫಾರ್ವರ್ಡ್‌ಗಳು: ಹಿತೇಶ್ ಶರ್ಮ, ಬಲ್ವಂತ್ ಸಿಂಗ್, ಜೇಜೆ ಲಾಲ್‌ಪೆಕುಲ್ವಾ, ಸೆಮಿನ್‌ಲೆನ್ ಡೌಂಗೆಲ್, ಅಲೆನ್ ಡಿಯೊರಿ, ಮನ್ವಿರ್ ಸಿಂಗ್ ಹಾಗೂ ಸುಮೀತ್ ಪಾಸ್ಸಿ.