ಸಾಕ್ಷಿದಾರರಿಗೆ ಬೆದರಿಕೆ: ಆರೋಪಿ ವಕೀಲನ ಬಂಧನಕ್ಕೆ ದಸಂಸ ಆಗ್ರಹ

Update: 2018-03-10 08:55 GMT

ಉಡುಪಿ, ಮಾ.10: ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ತಾಲೂಕಿನ ಮೂಡುಕೋಡಿಯ ಪರಿಶಿಷ್ಟ ಜಾತಿಗೆ ಸೇರಿದ ಬಡಕೂಲಿ ಕಾರ್ಮಿಕ ಸಾಧು ಎಂಬವರಿಗೆ ಸಾಕ್ಷ ನುಡಿಯದಂತೆ ಬೆದರಿಕೆಯೊಡ್ಡಿದ ಉಡುಪಿ ವಕೀಲರಾದ ಅಲೆವೂರು ಪ್ರೇಮರಾಜ ಕಿಣಿ, ರಾಜೇಶ್ ಪಡುಬಿದ್ರೆ ಸಹಿತ ಮೂವರನ್ನು ಕೂಡಲೇ ಬಂಧಿಸಬೇಕು ಎಂದು ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಚಿಂತಕ ಜಯನ್ ಮಲ್ಪೆ, ಸಾಧು ಅವರ ತಾಯಿ ಕುಂದಾದು 2012ರಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದು, ವಿಮಾ ಕಂಪೆನಿಯು ಅಪಘಾತ ವಿಮಾ ಪರಿಹಾರ ಮೊತ್ತ 2,57,549ರೂ.ವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಠೇವಣಿ ಮಾಡಿತ್ತು. ಈ ಹಣವನ್ನು ಉಡುಪಿ ವಕೀಲ ಅಲೆವೂರು ಪ್ರೇಮರಾಜ ಕಿಣಿ ಸಾಧು ಮತ್ತು ಅವರ ಕುಟುಂಬದವರ ನಕಲಿ ಸಹಿ, ಜಿಲ್ಲಾ ನ್ಯಾಯಾಲಯದ ನಕಲಿ ಸೀಲು, ಶಿರಸ್ತೇದಾರರ ನಕಲಿ ಸಹಿ ಮತ್ತು ಇತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಿದ್ದು, ಈ ಸಂಬಂಧ ಸಾಧು ನೀಡಿದ ದೂರಿನ್ವಯ ಅಲೆವೂರು ಪ್ರೇಮ ರಾಜ ಕಿಣಿ ಮತ್ತಿತ್ತರರ ಮೇಲೆ ಪ್ರಕರಣ ದಾಖಲಾಗಿತ್ತು ಎಂದರು.

ಇದೀಗ ಏಳು ವರ್ಷಗಳ ಬಳಿಕ ವಿಚಾರಣೆಗೆ ದಿನಾಂಕ ನಿಗದಿಪಡಿಸಿದ ನ್ಯಾಯಾಲಯ ಮಾ.5ರಂದು ಸಾಕ್ಷ ನುಡಿಯಲು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಾಧು ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಬೆಳ್ತಂಗಡಿಯಲ್ಲಿರುವ ಸಾಧು ಅವರ ಮನೆಗೆ ತೆರಳಿದ ಪ್ರೇಮ್ ರಾಜ್ ಕಿಣಿ, ರಾಜೇಶ್ ಪಡುಬಿದ್ರೆ ಸೇರಿದಂತೆ ಮೂವರು ನ್ಯಾಯಾಲಯಕ್ಕೆ ಹಾಜರಾಗದಂತೆ ಮತ್ತು ಸಾಕ್ಷ ನುಡಿಯದಂತೆ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಈ ಮೂವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಮಾ.5ರಂದು ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಈಗ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ ಎಂದು ಅವರು ತಿಳಿಸಿದರು.

ಪ್ರಕರಣ ದಾಖಲಾಗಿ ಹಲವು ದಿನಗಳಾದರೂ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಪ್ರಭಾವಕ್ಕೆ ಒಳಗಾಗಿರುವ ಪೊಲೀಸರು ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ. ಇದು ಪೊಲೀಸ್ ಇಲಾಖೆಯ ನಿಷ್ಕ್ರಿಯತೆಗೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದರು.

 ಇದೊಂದು ಗಂಭೀರ ಪ್ರಕರಣವಾಗಿದ್ದು, ಎಲ್ಲ ಮೂರು ಮಂದಿ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆಯೊಡ್ಡಿ ಜಾಮೀನು ಶರ್ತಗಳನ್ನು ಉಲ್ಲಂಘಿಸಿರುವ ಆರೋಪಿ ಪ್ರೇಮ್‌ರಾಜ್ ಕಿಣಿಗೆ ನ್ಯಾಯಾಲಯ ನೀಡಿದ ಜಾಮೀನು ರದ್ದುಪಡಿಸಬೇಕು. ತಪ್ಪಿದಲ್ಲಿ ಇದರ ವಿರುದ್ಧ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಮತ್ತು ಮುಖ್ಯಮಂತ್ರಿ ಮನೆಯ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರಕರಣದ ಸಾಕ್ಷಿದಾರ ಸಾಧು, ದಲಿತ ಮುಖಂಡ ಸುಂದರ ಕಪ್ಪೆಟ್ಟು, ಅಂಬೇಡ್ಕರ್ ಯುವ ಸೇನೆಯ ಹರೀಶ್ ಸಾಲ್ಯಾನ್ ಮಲ್ಪೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News