ರಫೇಲ್ ಖರೀದಿಯಿಂದ 12,000 ಕೋ. ರೂ. ನಷ್ಟ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ, ಮಾ. 10: ಮೋದಿ ಸರಕಾರ ರಾಷ್ಟ್ರೀಯ ಭದ್ರತೆ ಬಗ್ಗೆ ರಾಜಿ ಮಾಡಿಕೊಂಡಿದೆ ಹಾಗೂ ಫ್ರೆಂಚ್ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ತೆರಿಗೆದಾರರಿಗೆ 12,000 ಕೋ. ರೂ. ನಷ್ಟ ಉಂಟು ಮಾಡಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ಕಂಪೆನಿ 11 ತಿಂಗಳ ಹಿಂದೆ ಕತರ್ ಹಾಗೂ ಈಜಿಪ್ಟ್‌ಗೆ ಯುದ್ಧ ವಿಮಾನ ಮಾರಾಟ ಮಾಡಿದ ಬೆಲೆಗಿಂತ ಅಧಿಕ ಬೆಲೆಗೆ ಅಂದರೆ 351 ಕೋ. ರೂ.ಗೆ ಭಾರತಕ್ಕೆ ಮಾರಾಟ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಂಪೆನಿ 2016ರಲ್ಲಿ 36 ರಫೇಲ್ ಜೆಟ್‌ಗಳನ್ನು ಭಾರತಕ್ಕೆ 7.5 ಶತಕೋಟಿ ಯುರೊಗೆ ಮಾರಾಟ ಮಾಡಿತ್ತು. ಆದರೆ, 2015ರಲ್ಲಿ 48 ಜೆಟ್‌ಗಳನ್ನು ಖತರ್ ಹಾಗೂ ಈಜಿಪ್ಟ್‌ಗೆ 7.9 ಶತಕೋಟಿ ಯುರೊಗೆ ಮಾರಾಟ ಮಾಡಿತ್ತು ಎಂದು ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಝಾದ್ ಹಾಗೂ ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ. ಪ್ರತಿ ವಿಮಾನಕ್ಕೆ ಭಾರತಕ್ಕೆ 1,670,70 ಕೋಟಿ ರೂ. ಹಾಗೂ ಈಜಿಪ್ಟ್, ಖತರ್‌ಗೆ 1,319.80 ಕೋಟಿ ರೂ. ಬೆಲೆ ನಿಗದಿಪಡಿಸಲಾಗಿತ್ತು ಎಂದು ಪಕ್ಷ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಝಾದ್, ಸುರ್ಜೇವಾಲ ಹಾಗೂ ಕೇಂದ್ರದ ಮಾಜಿ ಸಹಾಯಕ ಸಚಿವ ಜಿತೇಂದ್ರ ಸಿಂಗ್, ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಸರಕಾರ ಪಾರದರ್ಶಕತೆ ಪ್ರದರ್ಶಿಸಿಲ್ಲ ಎಂದು ಪ್ರತಿಪಾದಿಸಿದರು. ಯುಪಿಎ ಸ್ಥಗಿತಗೊಳಿಸಿದ್ದ 126 ರಫೇಲ್ ಜೆಟ್ ವಿಮಾನ ಖರೀದಿಯನ್ನು ಮೋದಿ ಸರಕಾರ ರದ್ದುಗೊಳಿಸಲಿಲ್ಲ. ರದ್ದುಗೊಳಿಸಿದ್ದರೆ, 41,212 ಕೋಟಿ ರೂಪಾಯಿ ಉಳಿಸಬಹುದಿತ್ತು ಎಂದು ಆಝಾದ್ ಪ್ರತಿಪಾದಿಸಿದರು.
ರಫೇಲ್ ಖರೀದಿ ಕುರಿತಂತೆ ಮೋದಿ ಸರಕಾರದ ‘ಗಮನ ಬೇರೆಡೆ ಸೆಳೆಯುವ ತಂತ್ರ’ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಯನ್ನೇ ಉಳಿಸಿಕೊಂಡಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆ ತಿಳಿಸಿದೆ.