ಮಹಿಳೆಯ ಸಾಮೂಹಿಕ ಅತ್ಯಾಚಾರಗೈದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ದುಷ್ಕರ್ಮಿಗಳು
ಜೈಪುರ, ಮಾ.10: ಆರು ಮಂದಿ ಯುವಕರು ಸೇರಿ 40ರ ಹರೆಯದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಈ ಘಟನೆಯನ್ನು ವಿಡಿಯೊ ಚಿತ್ರೀಕರಣ ನಡೆಸಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿರುವ ಬಗ್ಗೆ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ ಘಟನೆ ನಡೆದಿದ್ದು , ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪ್ರಸಾರವಾಗಿರುವ ಬಗ್ಗೆ ಮಾಹಿತಿ ತಿಳಿದ ಬಳಿಕ ಮಹಿಳೆ ಬರಾನ್ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಕೋಟ ಪಟ್ಟಣದಲ್ಲಿ ರಸ್ತೆ ಬದಿಯ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಅತ್ತೆಮನೆಗೆ ಹೋಗಲೆಂದು ಬರಾನ್‌ಗೆ ಬಂದಿದ್ದಾಗ ಆಕೆಗೆ ಪರಿಚಯಸ್ತನಾಗಿರುವ ಚೇತನ್ ಮೀನ(21) ಎಂಬ ಯುವಕ ಬೈಕ್‌ನಲ್ಲಿ ಡ್ರಾಪ್ ನೀಡುವುದಾಗಿ ತಿಳಿಸಿ ಸಮಸ್‌ಪುರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಇನ್ನೂ ಐವರು ಯುವಕರು ಸೇರಿಕೊಂಡು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಈ ದೃಶ್ಯದ ವೀಡಿಯೊ ಚಿತ್ರೀಕರಣ ನಡೆಸಿದ್ದಾರೆ.ಮರುದಿನ ಆಕೆಯನ್ನು ಅತ್ತೆಮನೆಯ ಸಮೀಪ ಬಿಟ್ಟ ಯುವಕರು, ಘಟನೆಯ ಬಗ್ಗೆ ಬಾಯ್ಬಿಟ್ಟರೆ ಕುಟುಂಬದ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.