ಶಾಲಾ ಪಠ್ಯದಲ್ಲಿ ಧಾರ್ಮಿಕ ಪಾಠ ಪುಸ್ತಕ ಸೇರ್ಪಡೆ: ಮೇನಕಾ ಗಾಂಧಿ ಸಲಹೆ

Update: 2018-03-11 13:48 GMT

ಹೊಸದಿಲ್ಲಿ, ಮಾ.11: ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಪ್ರೋತ್ಸಾಹಿಸಲು ಅಧ್ಯಯನ ವಿಷಯದಲ್ಲಿ ಎಲ್ಲಾ ಧರ್ಮದ ಪುಸ್ತಕಗಳನ್ನು ಹಾಗೂ ನೈತಿಕ ವಿಜ್ಞಾನದ ಪಾಠಪುಸ್ತಕಗಳನ್ನು ಸೇರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮೇನಕಾ ಗಾಂಧಿ ಸಲಹೆ ನೀಡಿದ್ದಾರೆ.

  ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ನಿರ್ಣಯ ಕೈಗೊಳ್ಳುವ ಅತ್ಯುನ್ನತ ಸಂಸ್ಥೆಯಾಗಿರುವ ಕೇಂದ್ರ ಶಿಕ್ಷಣ ಸಲಹಾ ಮಂಡಳಿ(ಸಿಎಬಿಇ)ಯ 65ನೇ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೇನಕಾ ಗಾಂಧಿ, ಶಾಲಾ ಅಧ್ಯಯನ ಕ್ರಮದಲ್ಲಿ ನೈತಿಕ ವಿಜ್ಞಾನ ತರಗತಿ ಹಾಗೂ ಎಲ್ಲಾ ಧರ್ಮದ ಪುಸ್ತಕಗಳನ್ನು ಸೇರಿಸುವುದರಿಂದ ವಿದ್ಯಾರ್ಥಿಗಳು ಇತರ ಧರ್ಮವನ್ನೂ ಶ್ಲಾಘಿಸಲು ಆರಂಭಿಸುತ್ತಾರೆ. ಇದು ಧಾರ್ಮಿಕ ಸಹಿಷ್ಣುತೆಯ ಭಾವನೆಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಒಡಿಶಾದ ಶಿಕ್ಷಣ ಸಚಿವ ಬದ್ರಿನಾರಾಯಣ್ ಪಾತ್ರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಸಹಿಷ್ಣುತೆಯ ಭಾವನೆ ಹಾಗೂ ದೇಶಾಭಿಮಾನ ಬೆಳೆಸುವ ರೀತಿಯಲ್ಲಿ ಪಠ್ಯಕ್ರಮಗಳ ಬದಲಾವಣೆಯಾಗಬೇಕು ಎಂದು ಸಲಹೆ ನೀಡಿದರು.

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಸಸ್ಯಾಹಾರ ಖಾದ್ಯಪಟ್ಟಿ, ಶಾಲೆಯಲ್ಲಿ ಹಾಜರಿ ಕರೆಯುವಾಗ ‘ಹಾಜರಿದ್ದೇನೆ ಮೇಡಮ್/ಸರ್’ ಎನ್ನುವ ಬದಲು ಜೈಹಿಂದ್ ಎಂದು ಹೇಳುವುದು, ಮೌಲ್ಯಾಧಾರಿತ ಹಾಗೂ ಸಂಸ್ಕೃತಿ ಆಧರಿತ ಶಿಕ್ಷಣ ಕ್ರಮಕ್ಕೆ ಪ್ರೋತ್ಸಾಹ ನೀಡುವುದು ಇತ್ಯಾದಿ ಸಲಹೆಗಳನ್ನು ಸಭೆಯಲ್ಲಿ ಮುಂದಿರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News