ಐಸಿಎಂಆರ್‌ಗೆ ಹೆಚ್ಚಿನ ನಿಧಿ ಒದಗಿಸಲು ಸಂಸದೀಯ ಸಮಿತಿ ಒತ್ತಾಯ

Update: 2018-03-11 13:56 GMT

ಹೊಸದಿಲ್ಲಿ, ಮಾ.11: ಸಂಶೋಧನಾ ಕಾರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿರುವ ಸಂಸದೀಯ ಸಮಿತಿಯು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ಐಸಿಎಂಆರ್)ಗೆ ಹೊಸ ಔಷಧದ ಅಭಿವೃದ್ಧಿ, ಚುಚ್ಚುಮದ್ದು ಇತ್ಯಾದಿಗಳ ಕುರಿತ ಸಂಶೋಧನೆಗೆ ಹೆಚ್ಚಿನ ನಿಧಿ ಒದಗಿಸಬೇಕೆಂದು ಕೋರಿದೆ.

 ಆರೋಗ್ಯ ಸಂಶೋಧನಾ ಚಟುವಟಿಕೆಗಳನ್ನು ನಡೆಸುವ ಜವಾಬ್ದಾರಿ ಹೊಂದಿರುವ ಏಕೈಕ ಸಂಸ್ಥೆಯಾಗಿರುವ ಐಸಿಎಂಆರ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಆರೋಗ್ಯಕ್ಷೇತ್ರದಲ್ಲಿ ಎದುರಾಗುವ ವಿವಿಧ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಸಂಸದೀಯ ಸಮಿತಿಯು 2018-19ರಲ್ಲಿ ಅನುದಾನಕ್ಕೆ ಬೇಡಿಕೆಯ ಕುರಿತಾದ ತನ್ನ 106ನೇ ವರದಿಯಲ್ಲಿ ತಿಳಿಸಿದೆ.

 ಅಗತ್ಯವಿರುವ ಅನುದಾನಕ್ಕೆ ಆರೋಗ್ಯ ಸಂಶೋಧನಾ ವಿಭಾಗವು ವಿತ್ತ ಸಚಿವಾಲಯದ ಒಪ್ಪಿಗೆ ಪಡೆಯಲು ಸಫಲವಾಗಿಲ್ಲ. ಆದ್ದರಿಂದ ವಿತ್ತೀಯ ವರ್ಷದ ಅಂತಿಮ ಹಂತದಲ್ಲಿ ಹೆಚ್ಚುವರಿ ನಿಧಿಯನ್ನು ಪಡೆಯಬೇಕಾಗಿದೆ ಎಂದು ಸಮಿತಿ ತಿಳಿಸಿದೆ.

 ಬಜೆಟ್ ಪೂರ್ವ ಚರ್ಚೆಗಳನ್ನು ನಡೆಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಸಾಕಷ್ಟು ಪೂರ್ವಭಾವಿ ಚಟುವಟಿಕೆ ಹಮ್ಮಿಕೊಳ್ಳಬೇಕು ಹಾಗೂ ಈ ಶಿಫಾರಸುಗಳನ್ನು ಕಳಿಸುವ ಮೂಲಕ ಪೂರಕ ಅನುದಾನ ಪಡೆಯಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

   ಆರೋಗ್ಯ ಸಂಶೋಧನಾ ವಿಭಾಗಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿಗದಿಗೊಳಿಸಲು ಸಮಿತಿಯು ವಿತ್ತಸಚಿವಾಲಯಕ್ಕೆ ಬೇಡಿಕೆ ಸಲ್ಲಿಸಲಿದೆ. ಈ ಮೂಲಕ ಐಸಿಎಂಆರ್ ಆರೋಗ್ಯಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಅನುದಾನಿತ ಸಂಸ್ಥೆಯಾಗಿರುವ ಐಸಿಎಂಆರ್ ಜೈವಿಕ ವೈದ್ಯಕೀಯ ಸಂಶೋಧನೆಯನ್ನು ಪ್ರೋತ್ಸಾಹಿಸುವ , ಸಂಘಟಿಸುವ ಹಾಗೂ ನಡೆಸುವ ಅತ್ಯುನ್ನತ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News