ಗುಜರಾತ್ ಚುನಾವಣೆ ಮುನ್ನ ರಾಹುಲ್ ಗಾಂಧಿ ಅವರನ್ನು ಭೇಟಿ ಆಗದೇ ಇರುವುದು ಪ್ರಮಾದ: ಹಾರ್ದಿಕ್ ಪಟೇಲ್

Update: 2018-03-11 15:26 GMT

ಹೊಸದಿಲ್ಲಿ, ಮಾ. 11: ಗುಜರಾತ್ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗದೇ ಇರುವುದು ಪ್ರಮಾದ ಎಂದು ಶನಿವಾರ ಹೇಳಿರುವ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್, ಇದರಿಂದಾಗಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದ ಹಾಗೂ ಪಾಟಿದಾರ್ ಮೀಸಲಾತಿ ಚಳವಳಿಯ ನಾಯಕ 24ರ ಹರೆಯದ ಹಾರ್ದಿಕ್ ಪಟೇಲ್, ತಾನು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರೆ ಪ್ರತಿಪಕ್ಷ ಬಹುಮತ ಪಡೆಯುತ್ತಿತ್ತು ಎಂದಿದ್ದಾರೆ.

ಮುಂಬೈಯಲ್ಲಿ ಇಂಡಿಯಾ ಟುಡೆ ಸಮಾವೇಶದಲ್ಲಿ ಮಾತನಾಡಿದ ಅವರು, ‘‘ಈ ಹಿಂದೆ ಕೂಡಾ ನಾನು ಇದನ್ನೇ ಹೇಳಿದ್ದೆ ಹಾಗೂ ಈಗ ಕೂಡ ಇದನ್ನೇ ಹೇಳುತ್ತಿದ್ದೇನೆ. ನಾನು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರಲಿಲ್ಲ. ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಹಾಗೂ ಉದ್ಧವ್ ಠಾಕ್ರೆ ಅವರನ್ನು ನಾನು ಬಹಿರಂಗವಾಗಿ ಭೇಟಿಯಾಗಲು ಸಾಧ್ಯವಾಯಿತು. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಯಾವುದೇ ಸಮಸ್ಯೆ ಇರಲಿಲ್ಲ.’’ ಎಂದರು. ‘‘ಇದು ತಪ್ಪು. ನಾನು ಅವರನ್ನು ಭೇಟಿಯಾಗಿದ್ದರೆ, ಬಿಜೆಪಿ 99 ಸ್ಥಾನಗಳನ್ನು ಪಡೆಯುತ್ತಿರಲಿಲ್ಲ. 79 ಸ್ಥಾನಗಳನ್ನು ಮಾತ್ರ ಪಡೆಯುತ್ತಿತ್ತು’’ ಎಂದು ಅವರು ಹೇಳಿದರು. 182 ಸ್ಥಾನಗಳುಳ್ಳ ವಿಧಾನ ಸಭೆಯಲ್ಲಿ 79 ಸ್ಥಾನಗಳನ್ನು ಪಡೆಯುವ ಮೂಲಕ ಗುಜರಾತ್‌ನಲ್ಲಿ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ. ಬಿಜೆಪಿಗೆ ಹೋಲಿಸಿದರೆ, ಕಾಂಗ್ರೆಸ್ ಸುಧಾರಣೆ ಕಂಡಿದೆ. ಆದರೆ, ಗುಜರಾತ್‌ನಲ್ಲಿ ಬಿಜೆಪಿಯ ಪ್ರಾಬಲ್ಯ ಹೊಡೆದೋಡಿಸಲು ಸಾಧ್ಯವಾಗಿಲ್ಲ ಎಂದರು.

ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪಿಕೊಂಡ ಬಳಿಕ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲಾಗುವುದು ಎಂದು ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ನವೆಂಬರ್ ಅಂತ್ಯದಲ್ಲಿ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News