ಪಾಕಿಸ್ತಾನದ ಪ್ರಪ್ರಥಮ ದಲಿತ ಸಂಸದೆ ಪ್ರಮಾಣ ವಚನ ಸ್ವೀಕಾರ
ಇಸ್ಲಾಮಾಬಾದ್, ಮಾ.12: ಕೃಷ್ಣ ಕುಮಾರಿ ಕೊಹ್ಲಿ ಪಾಕಿಸ್ತಾನದ ಮೇಲ್ಮನೆಗೆ ಪ್ರಪ್ರಥಮ ಬಾರಿ ಆಯ್ಕೆಯಾಗಿರುವ ಹಿಂದೂ ದಲಿತ ಮಹಿಳೆಯಾಗಿದ್ದು ಸೋಮವಾರದಂದು ಇತರ 51 ಸಂಸದರ ಜೊತೆಗೆ ಮೇಲ್ಮನೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಲಾವಲ್ ಭುಟ್ಟೊ ಝರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸದಸ್ಯೆಯಾಗಿರುವ 39ರ ಹರೆಯದ ಕೊಹ್ಲಿ ಸಿಂಧ್ ಪ್ರಾಂತ್ಯದ ಥಾರ್‌ನ ನಗರ್‌ಪರ್ಕರ್ ಜಿಲ್ಲೆಯವರಾಗಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೊಹ್ಲಿ ಮಾರ್ಚ್ 3ರಂದು ಸಂಸದೆಯಾಗಿ ಆಯ್ಕೆಯಾದರು. ಆಕೆಯನ್ನು ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತ ಸ್ಥಾನದಿಂದ ಆಯ್ಕೆ ಮಾಡಲಾಗಿತ್ತು. ಸೋಮವಾರದಂದು ಆಕೆ ಸಾಂಪ್ರದಾಯಿಕ ಥಾರಿ ವಸ್ತ್ರವನ್ನು ಧರಿಸಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಂಸತ್ ಭವನಕ್ಕೆ ಆಗಮಿಸಿದರು. ಸಭಾಧ್ಯಕ್ಷರಾದ ಸರ್ದಾರ್ ಯಾಕೂಬ್ ಖಾನ್ ನಝರ್, ಕೃಷ್ಣ ಕುಮಾರಿ ಕೊಹ್ಲಿಗೆ ಪ್ರಮಾಣ ವಚನ ಭೋದಿಸಿದರು. ಥಾರ್‌ಪರ್ಕರ್‌ನಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ಅಲ್ಲಿನ ಆರೋಗ್ಯಸೇವೆ ಮತ್ತು ನೀರಿನ ಸೌಲಭ್ಯದ ಕೊರತೆಯನ್ನು ನೀಗಿಸಲು ಪ್ರಯತ್ನಿಸುವುದಾಗಿ ಕೊಹ್ಲಿ ಇದೇ ವೇಳೆ ತಿಳಿಸಿದ್ದಾರೆ. ಕೃಷ್ಣ ಕುಮಾರಿಯ ಆಯ್ಕೆ ಪಾಕಿಸ್ತಾನದಲ್ಲಿ ಮಹಿಳಾ ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂದ ಜಯವಾಗಿದೆ ಎಂದು ಪಿಪಿಪಿ ತಿಳಿಸಿದೆ. ಇದಕ್ಕೂ ಮೊದಲು ಪಿಪಿಪಿ ಪ್ರಥಮ ಹಿಂದೂ ಮಹಿಳೆ ರತ್ನಾ ಭಗ್ವಾನ್‌ದಾಸ್ ಚಾವ್ಲಾರನ್ನು ಸಂಸದೆಯಾಗಿ ಆಯ್ಕೆ ಮಾಡಿತ್ತು.