ಬಿಜೆಪಿ ಸೇರಿದ ಹಿರಿಯ ನಾಯಕನ ವಿರುದ್ಧವೇ ಚಾಟಿ ಬೀಸಿದ ಸುಷ್ಮಾ ಸ್ವರಾಜ್

Update: 2018-03-12 15:34 GMT

ಹೊಸದಿಲ್ಲಿ, ಮಾ. 12 : ಸಭ್ಯತೆ, ನಾಗರೀಕತೆಗಳಿಗೆ ಪಕ್ಷದ ಹಂಗಿಲ್ಲ ಎಂಬುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯ ವಿರುದ್ಧ ಅವಹೇಳನಕಾರಿ ಮಾತನ್ನು ಯಾರು ಆಡಿದರೂ ತಾವು ಅದನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸುಷ್ಮಾ ರವಾನಿಸಿದ್ದಾರೆ.

ಸಮಾಜವಾದಿ ಪಕ್ಷದ ಹಿರಿಯ ಮುಖಂಡ, ಬಿಜೆಪಿ ಹಾಗು ಪ್ರಧಾನಿ ಮೋದಿಯ ಉಗ್ರ ಟೀಕಾಕಾರ ಎಂದೇ ಗುರುತಿಸಲ್ಪಟ್ಟ ನರೇಶ್ ಅಗರ್ವಾಲ್ ಸೋಮವಾರ ಬಿಜೆಪಿ ಸೇರಿದ್ದಾರೆ ! ಅವರು ಬಿಜೆಪಿ ಸೇರಿದ್ದೇ ಎಲ್ಲರ ಹುಬ್ಬೇರಿಸಿದ್ದರೆ, ಸೇರ್ಪಡೆ ಬೆನ್ನಿಗೇ ಅವರು ನೀಡಿದ ಹೇಳಿಕೆ  ತೀವ್ರ ಟೀಕೆಗೆ ಪಾತ್ರವಾಗಿತ್ತು.

ರಾಜ್ಯಸಭಾ ಚುನಾವಣೆಗೆ ತಮ್ಮ ಬದಲು ಜಯಾ ಬಚ್ಚನ್ ರನ್ನು ಆಯ್ಕೆ ಮಾಡಿದ ಪಕ್ಷದ ನಿರ್ಧಾರವನ್ನು ಪ್ರತಿಭಟಿಸಿ ನರೇಶ್ ಅಗರ್ವಾಲ್ ತಮ್ಮ ಎಸ್ಪಿ ಶಾಸಕ ಪುತ್ರನ ಜೊತೆ ಬಿಜೆಪಿ ಸೇರಿದ್ದರು.

" ನನ್ನನ್ನು ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡುವವಳ ಜೊತೆ ಹೋಲಿಸಿ ಟಿಕೆಟ್ ನಿರಾಕರಿಸಲಾಯಿತು. ಇದು ನನಗೆ ನೋವಾಗಿದೆ " ಎಂದು ನರೇಶ್ ಪರೋಕ್ಷವಾಗಿ ಜಯಾ ಬಚ್ಚನ್ ರನ್ನು ಅವಹೇಳನ ಮಾಡಿದ್ದರು. ಈ ಬಗ್ಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 

ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ ಅವರು " ಶ್ರೀ ನರೇಶ್ ಅಗರ್ವಾಲ್ ಅವರು ಬಿಜೆಪಿ ಸೇರಿದ್ದಾರೆ. ಅವರಿಗೆ ಸ್ವಾಗತ . ಆದರೆ ಜಯಾ ಬಚ್ಚನ್ ಅವರ ಬಗ್ಗೆ ಮಾಡಿರುವ ಅವಹೇಳನ ಸ್ವೀಕಾರಾರ್ಹವಲ್ಲ. ಅದು ಸರಿಯಲ್ಲ " ಎಂದು ಟ್ವೀಟ್ ಮಾಡಿದ್ದಾರೆ. 

ಅಲ್ಲಿಗೆ ಬಿಜೆಪಿ ಸೇರಿದ ಬೆನ್ನಿಗೇ ನಾಲಗೆಯ ಲಗಾಮು ಕಳೆದುಕೊಂಡು ಅದೇ ಪಕ್ಷದ ಹಿರಿಯ ನಾಯಕಿಯಿಂದ ನರೇಶ್ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News