ನ್ಯಾಯಾಲಯದ ತೀರ್ಪು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂದ ಜಯವಾಗಿದೆ: ಹಾದಿಯಾ

Update: 2018-03-12 16:32 GMT

ಕೋಝಿಕ್ಕೋಡ್, ಮಾ.12: ತನ್ನ ಪತಿಯನ್ನು ಸೇರಲು ನೆರವಾದ ಸರ್ವೋಚ್ಚ ನ್ಯಾಯಾಲಯಕ್ಕೆ ನಾನು ಚಿರ ಋಣಿಯಾಗಿದ್ದೇನೆ ಎಂದು ಕೇರಳದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಹಾದಿಯಾ ಸೋಮವಾರ ತಿಳಿಸಿದ್ದಾರೆ. ಹಾದಿಯಾ ಮತ್ತು ಶಫೀನ್ ಜಹಾನ್ ವಿವಾಹವನ್ನು ರದ್ದುಗೊಳಿಸಿದ ಕೇರಳ ಉಚ್ಚ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ ಆಕೆ ತನ್ನ ಪತಿಯ ಜೊತೆಗೆ ತೆರಳಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿದ ಹಾದಿಯಾ, ನಾನು ಸರಿಯೆಂದು ನಂಬುವ ನಂಬಿಕೆ ಜೊತೆ ಜೀವಿಸುವ ಸ್ವಾತಂತ್ರವನ್ನು ನ್ಯಾಯಾಲಯದ ಈ ತೀರ್ಪು ನನಗೆ ನೀಡಿದೆ ಎಂದು ತಿಳಿಸಿದ್ದಾರೆ.

ನಾನು ಅನುಭವಿಸಿದ ನೋವು ಮತ್ತು ಕಿರುಕುಳವನ್ನು ಈ ದೇಶದ ಇತರ ಯಾರು ಕೂಡಾ ಅನುಭವಿಸಬಾರದು ಎಂದು ಹಾದಿಯಾ ತಿಳಿಸಿದ್ದಾರೆ. ಈ ಕುರಿತು ವಿವಾದವನ್ನು ಮುಂದುವರಿಸಬಾರದು ಎಂದಾಕೆ ಮನವಿ ಮಾಡಿದ್ದಾರೆ. ಸದ್ಯ ಹಾದಿಯಾ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ಶಿವಾಜಿ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತನ್ನ ಹೋಮಿಯೋಪಥಿ ಔಷಧ ಮತ್ತು ಶಸ್ತ್ರಚಿಕಿತ್ಸೆ ಪದವಿ ಶಿಕ್ಷಣವನ್ನು ಮುಂದುವರಿಸಿದ್ದಾರೆ. ಹಾದಿಯಾ ಪ್ರಕರಣದಲ್ಲಿ ಲವ್ ಜಿಹಾದ್ ನಡೆದಿರುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಅನುಮಾನ ವ್ಯಕ್ತಪಡಿಸಿದ್ದ ಕಾರಣ ಆಕೆಯ ವಿವಾಹ ಮತ್ತು ಮತಾಂತರದ ಬಗ್ಗೆ ತನಿಖೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷ ಆಗಸ್ಟ್‌ನಲ್ಲಿ ಸೂಚಿಸಿತ್ತು. ಇದಕ್ಕೂ ಮೊದಲು ಕೇರಳ ಉಚ್ಚ ನ್ಯಾಯಾಲಯ ಹಾದಿಯಾ ಮತ್ತು ಶಫೀನ್ ವಿವಾಹವನ್ನು ಅಸಿಂಧು ಎಂದು ತಿಳಿಸಿ ರದ್ದು ಪಡಿಸಿತ್ತು. ಆದರೆ ಈ ತೀರ್ಪಿನ ವಿರುದ್ಧ ಹಾಗೂ ಹಾದಿಯಾಳನ್ನು ಆಕೆಯ ಹೆತ್ತವರ ಸುಪರ್ದಿಗೆ ಒಪ್ಪಿಸಿದ ನ್ಯಾಯಾಲಯದ ಆದೇಶದ ವಿರುದ್ಧ ಶಫೀನ್ ಶ್ರೇಷ್ಠ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಹಾದಿಯಾಳನ್ನು ಆಕೆಯ ಹೆತ್ತವರಿಂದ ಸ್ವತಂತ್ರಗೊಳಿಸಿ ಆಕೆ ಶಿಕ್ಷಣವನ್ನು ಮುಂದುವರಿಸಲು ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News