ಮಂಗಳೂರು: ಸಿಐಟಿಯುನಿಂದ ಇಪಿಎಫ್ ಕಚೇರಿಗೆ ಮುತ್ತಿಗೆ

Update: 2018-03-13 11:51 GMT

ಮಂಗಳೂರು, ಮಾ.13: ಬೀಡಿ ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಮತ್ತು ಪಿಂಚಣಿ ದಾಖಲೆ ಪತ್ರಗಳನ್ನು ಸರಿಪಡಿಸಿ ಅವರಿಗೆ ಸೂಕ್ತ ಸೌಲಭ್ಯವನ್ನು ಒದಗಿಸಲು ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ಇಪಿಎಫ್ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಪ್ರಸಕ್ತ ಕೇಂದ್ರ ಸರಾಕರ ಸರಕಾರಿ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಬೀಡಿ ಕಾರ್ಮಿಕರು ಕೆಲಸಕ್ಕೆ ಸೇರುವಾಗ ಅವರಲ್ಲಿ ಯಾವುದೇ ರೀತಿಯ ಹುಟ್ಟಿದ ದಿನಾಂಕವಿಲ್ಲದೆ ಸೂಕ್ತ ದಾಖಲೆ ಪತ್ರ ನೀಡಿರುವುದಿಲ್ಲ. ಆದರೆ ಈಗ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ಅದನ್ನು ಪಿಎಫ್ ಖಾತೆಗೆ ಜೋಡಿಸಬೇಕಾಗಿದೆ. ಆದರೆ ಸೂಕ್ತ ದಾಖಲೆಯ ಕೊರತೆಯಿಂದ ಬಡ ಬೀಡಿ ಕಾರ್ಮಿಕರು ಪರದಾಡುವಂತಾಗಿದೆ. ದಾಖಲೆ ಪತ್ರಗಳನ್ನು ಸರಿಪಡಿಸಲು ಬೀಡಿ ಕಾರ್ಮಿಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳಿಗೆ ಇಲಾಖೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಬಳಿಕ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಪಿಎಫ್‌ಗಾಗಿ ಬೀಡಿ ಕಾರ್ಮಿಕರ ಬವಣೆಯನ್ನು ತೆರೆದಿಟ್ಟರು. ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಬೀಡಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಇಪಿಎಫ್ ಕಚೇರಿ ಪ್ರವೇಶ ದ್ವಾರದ ಬಳಿ ಧರಣಿ ಕುಳಿತರು.

ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಬಾರದು. ಪಿಎಫ್ ಕಚೇರಿಯಲ್ಲಿ ದಾಖಲಾಗಿರುವ ಜನ್ಮ ದಿನಾಂಕವನ್ನು ಅಧಿಕೃತಗೊಳಿಸಬೇಕು. ಪಿಂಚಣಿದಾರರಿಗೆ ಅವರ ಸೌಲಭ್ಯ ಪಡೆಯುವ ಕ್ರಮವನ್ನು ಸರಳೀಕರಣಗೊಳಿಸಬೇಕು. ಪಿಂಚಣಿದಾರರ ಜೀವಿತ ಪ್ರಮಾಣ ಪತ್ರಕ್ಕಾಗಿ ಪ್ರತಿ ಬ್ಯಾಂಕ್‌ನಲ್ಲಿಯೇ ಹೆಬ್ಬೆಟ್ಟು ಗುರುತು ಪಡೆಯುವ ವ್ಯವಸ್ಥೆ ಮಾಡಬೇಕು. ಎಲ್ಲಾ ಪಿಎಫ್ ಖಾತೆದಾರರ ಹಣ ಅವರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕೆಂದು ಧರಣಿನಿರತ ಬೀಡಿ ಕಾರ್ಮಿಕರು ಒತ್ತಾಯಿಸಿದರು.

ಧರಣಿಯಲ್ಲಿ ಬೀಡಿ ಕಾರ್ಮಿಕ ಸಂಘಟನೆಯ ನಾಯಕರಾದ ಯು.ಬಿ.ಲೋಕಯ್ಯ, ಸದಾಶಿವ ದಾಸ್, ಜಯಂತಿ ಶೆಟ್ಟಿ, ಪದ್ಮಾವತಿ ಶೆಟ್ಟಿ, ಗಂಗಯ್ಯ ಅಮೀನ್, ಭಾರತಿ ಬೋಳಾರ, ರಾಮಣ್ಣ ವಿಟ್ಲ, ಮುನೀರ್ ಕಾಟಿಪಳ್ಳ, ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್ ಮೊದಲಾದವರು ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News