‘ಓಟದ ರಾಣಿ’ ಜತೆ ಸೆಲ್ಫಿಗೆ ಮುಗಿಬಿದ್ದ ವೈದ್ಯಕೀಯ ವಿದ್ಯಾರ್ಥಿಗಳು!

Update: 2018-03-13 08:33 GMT

 ಮಂಗಳೂರು, ಮಾ.13: ಇಂದು ಬೆಳಗ್ಗೆ ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ನಿರ್ಮಿಸಲಾಗಿರುವ ನೂತನ ಒಳಾಂಗಣ ಕ್ರೀಡಾಂಗಣ, ಜಿಮ್ನಾಶಿಯಂ ಮತ್ತು ಬಹು ಅಂತಸ್ತಿನ ಪಾರ್ಕಿಂಗ್ ವಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ‘ಓಟದ ರಾಣಿ’, ಅಥ್ಲೆಟ್ ಲೋಕದ ದಂತ ಕತೆ, ಪಿ.ಟಿ.ಉಷಾ ಅವರೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

 ಫಾದರ್ ಮುಲ್ಲರ್ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಸಮಾರಂಭದ ಬಳಿಕ ಜಿಮ್ನಾಶಿಯಂ ಉದ್ಘಾಟನೆಗೆ ಪಿ.ಟಿ.ಉಷಾ ತೆರಳುತ್ತಿದ್ದಂತೆ ಅಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಕೂಡಾ ಅವರ ಜತೆ ಸೆಲ್ಫಿ ತೆಗೆಸಿಕೊಂಡು ಸಂತಸಪಟ್ಟರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಉತ್ತಮ ಸಾಧನೆಯ ವಿಶ್ವಾಸ

 ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಗೋಲ್ಡ್ ಕೋಸ್ಟ್‌ನಲ್ಲಿ 21ನೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 31 ಸದಸ್ಯರಿರುವ ಭಾರತ ತಂಡ ಉತ್ತಮವಾದ ಸಾಧನೆ ನೀಡುವ ನಿರೀಕ್ಷೆಯಿದೆ. ಈ ವರ್ಷದ ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ಇದಾಗಲಿದೆ ಎಂದು ಪಿ.ಟಿ.ಉಷಾ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಹಿಳೆಯರ 200 ಹಾಗೂ 400 ಮೀಟರ್‌ನಲ್ಲಿ ಹಿಮಾದಾಸ್ ಹಾಗೂ 400 ಮೀಟರ್ ಹರ್ಡಲ್ಸ್ ಹಾಗೂ 400 ಮೀ.ನಲ್ಲಿ ಧಾರುಣ್ ಅಯ್ಯಸ್ವಾಮಿ ಉತ್ತಮ ಪ್ರದರ್ಶನ ನೀಡುತ್ತಾರೆ ಎನ್ನುವ ಭರವಸೆಯಿದೆ. ಹಿಮಾದಾಸ್ ಉತ್ತಮವಾಗಿ ದೇಶದಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಓಟದಲ್ಲಿ ಒಂದು ನಿಮಿಷವನ್ನು ಕೂಡ ಕಡಿಮೆ ಮಾಡಲು ಒಂದು ವರ್ಷದ ಸಾಧನೆ ಇರುತ್ತದೆ. ಈ ಹಿಂದೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ಗಳನ್ನು ನೋಡಲು ನಾನು ಹೋಗುತ್ತಿದ್ದೆ. ಈ ಬಾರಿ ಹೋಗ್ತಾ ಇಲ್ಲ. ಇತರ ಕ್ರೀಡಾಕೂಟಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧ ಮಾಡುವಲ್ಲಿ ನಿರತನಾಗಿದ್ದೇನೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News