ಆಕಾಶದಿಂದ ಬಿತ್ತು 'ಅಪರಿಚಿತ ಯಂತ್ರ' : ಆತಂಕಗೊಂಡ ಇರ್ವತ್ತೂರು ಗ್ರಾಮಸ್ಥರು

Update: 2018-03-13 13:35 GMT

ಬಂಟ್ವಾಳ, ಮಾ. 13: ಆಕಾಶದಿಂದ ಅಡಿಕೆ ತೋಟವೊಂದಕ್ಕೆ ಪ್ಯಾರಾಶೂಟ್ ಸಹಿತ ಯಂತ್ರದ ಮಾದರಿಯಲ್ಲಿ ಅಪರಿಚಿತ ವಸ್ತುವೊಂದು ದೊರೆತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೀಡಾದ ಘಟನೆ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದೆ.

ಇಲ್ಲಿನ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ನಿರಂಜನ್ ಜೈನ್ ಎಂಬವರ ತೋಟದಲ್ಲಿ ಈ ಅಪರೂಪದ ವಸ್ತು ಕಾಣಸಿದ್ದು, ಸ್ಥಳೀಯರಿಗೆ ಇದೀಗ ಇದು ಕುತೂಹಲದ ಕೇಂದ್ರವಾಗಿದೆ.

ತಮ್ಮ ಅಡಿಕೆ ತೋಟಕ್ಕೆ ನೀರು ಹಾಯಿಸಲೆಂದು ಹೋಗಿದ್ದ ವೇಳೆ ಅಡಿಕೆ ಮರದ ಬುಡವೊಂದರಲ್ಲಿ ಈ ವಸ್ತು ದೊರೆತಿದೆ. ವಿಜ್ಞಾನಿಗಳು ಆಗಸದಲ್ಲಿ ಅಧ್ಯಯನಕ್ಕೆ ಹಾರಿಸಿರುವ ಯಂತ್ರ ಇದಾಗಿರಬಹುದು ಎಂದು ನಿರಂಜನ್ ಅವರು ಅಂದಾಜಿಸಿದ್ದರು.

ದ್ವಿಚಕ್ರ ವಾಹನದ ಬ್ಯಾಟರಿಯಂತಿರುವ ಈ ಯಂತ್ರಕ್ಕೆ ಪುಟ್ಟ ಪ್ಯಾರಾಶೂಟ್ ಅಳವಡಿಸಲಾಗಿದೆ. ತಯಾರಿಕಾ ಸಂಸ್ಥೆಯ ಹೆಸರು ಬರೆಯಲಾಗಿದೆ.

ಆತಂಕ ಬೇಡ: ಈ ವಸ್ತುವಿನ ಬಗ್ಗೆ ಆತಂಕ ಪಡಬೇಕಾಗಿಲ್ಲ. ಇದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ವೈಪರೀತ್ಯವನ್ನು ಮಾಪನ ಮಾಡುವ ಯಂತ್ರ.  ಹವಾಮಾನ ಇಲಾಖೆ ಆಗಾಗ ಇಂತಹಾ ಯಂತ್ರಗಳನ್ನು ಆಗಸಕ್ಕೆ ರವಾನಿಸುತ್ತಿರುತ್ತದೆ. ಪ್ಯಾರಾಶ್ಯೂಟ್‍ನಲ್ಲಿ ಸಮಸ್ಯೆಯಾದಾಗ ಸಾಮಾನ್ಯವಾಗಿ ಇದು ಸಮುದ್ರ ಅಥವಾ ಕಾಡು ಪ್ರದೇಶದಲ್ಲಿ ಬೀಳುತ್ತವೆ. ಈ ಯಂತ್ರವು ಆಕಸ್ಮಿಕವಾಗಿ ಜನವಸತಿ ಪ್ರದೇಶದಲ್ಲಿ ಬಿದ್ದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸಿ.ಎನ್.ಪ್ರಭು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News