ಮಾ.20ರಂದು ರಾಹುಲ್ ಗಾಂಧಿ ಮಂಗಳೂರಿಗೆ

Update: 2018-03-13 14:34 GMT

ಮಂಗಳೂರು, ಮಾ. 13: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾ. 20ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಉಸ್ತುವಾರಿ ವಿಷ್ಣುನಾಥ್ ಹೇಳಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಕಾಪುವಿಗೆ ಆಗಮಿಸಿ ಅಲ್ಲಿ ನಡೆಯುವ ಸೇವಾದಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಜನಾಶೀರ್ವಾದ ಯಾತ್ರೆ’ ಪ್ರಾರಂಭಗೊಳ್ಳಲಿದೆ. ಬಳಿಕ ಯಾತ್ರೆಗೆ ಪಡುಬಿದ್ರೆಯಲ್ಲಿ ಸ್ವಾಗತ ದೊರೆಯಲಿದ್ದು, ಅಲ್ಲಿಂದ ಮುಲ್ಕಿ ಬಳಿಕ ಸುರತ್ಕಲ್‌ಗೆ ಜನಾಶೀರ್ವಾದ ಯಾತ್ರೆ ಆಗಮಿಸಲಿದೆ ಎಂದರು.

ಮಧ್ಯಾಹ್ನ 4:30ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ರೋಡ್ ಶೋ ನಡೆಯಲಿದೆ. ಅಲ್ಲಿ ಸಮಾರೋಪ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ರಾಜ್ಯ ಮತ್ತು ರಾಷ್ಟ್ರದ ನಾಯಕರು ಭಾಗವಹಿಸಲಿದ್ದಾರೆ ಎಂದು ವಿಷ್ಣುನಾಥ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ರಾಹುಲ್ ಗಾಂಧಿ ಅವರು 20ರಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕಾಪುಗೆ ತೆರಳಲಿದ್ದಾರೆ. ಅಲ್ಲಿ ಸೇವಾದಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ಜನಾಶೀರ್ವಾದ ಯಾತ್ರೆ ಆರಂಭಗೊಳ್ಳಲಿದೆ. ಪಡುಬಿದ್ರೆ, ಮುಲ್ಕಿ, ಸುರತ್ಕಲ್‌ಗಳಲ್ಲಿ ರೋಡ್ ಶೋ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಹುಲ್ ಗಾಂಧಿ ಅವರ ಮೆರವಣಿಗೆಯು ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಹೊರಡಲಿದ್ದು, ಅಲ್ಲಿ ಸಂಜೆ 5:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಮೊಯ್ದಿನ್ ಬಾವ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್, ಮೇಯರ್ ಭಾಸ್ಕರ್ ಮೊಯ್ಲಿ, ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಜಿ.ಎ.ಬಾವಾ, ಶಾಹುಲ್ ಹಮೀದ್, ಟಿ.ಕೆ.ಸುಧೀರ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News