ಸಂಪತ್ತು ಸೃಷ್ಟಿ ಮಾಡುವ ರೈತರು, ಕಾರ್ಮಿಕರು ಬಡತನದಲ್ಲಿ: ಕೆ.ಶಂಕರ್

Update: 2018-03-14 17:21 GMT

ಬೈಂದೂರು, ಮಾ.14: ಸಂಪತ್ತನ್ನು ಸೃಷ್ಠಿ ಮಾಡುವ ಬಹುತೇಕ ರೈತರು ಮತ್ತು ಕಾರ್ಮಿಕರು ಬಡತನದಲ್ಲಿದ್ದಾರೆ. ರಾಜ್ಯದಲ್ಲಿ ಆಳುತ್ತಿರುವ ಕಾಂಗ್ರೆಸ್ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಇವರ ರಕ್ಷಣೆಗೆ ಬರುತ್ತಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಆರೋಪಿಸಿದ್ದಾರೆ.

ಸಿದ್ದಾಪುರದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಈ ಎರಡು ಪಕ್ಷಗಳಿಂದ ಜನ ಬೇಸತ್ತಿದ್ದು, ಈ ಹಿನ್ನೆಲೆಯಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಿಪಿಎಂ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ನಮ್ಮ ಹೋರಾಟಗಳಿಂದ ಕಾರ್ಮಿಕರ ಕೆಲವು ಸವಲತ್ತುಗಳು ಹೆಚ್ಚಾಗಿವೆ. ಕಾರವಾರ- ಬೆಂಗಳೂರು ರೈಲಿನ ಪ್ರಯಾಣದ ಅವಧಿ ಕಡಿಮೆ ಮಾಡಿಸಲು, ಮರಳು ಅಭಾವ ಹೋಗಲಾಡಿಸಲು, ಗಂಗೊಳ್ಳಿ ಸಮುದ್ರ ಕೊರೆತ ಸಂಭವಿಸಿದಾಗ ತಡೆಗೋಡೆ ಮುಂತಾದ ಕೆಲಸ ಮಾಡಿಸಲು ಸಾಧ್ಯವಾಗಿದೆ. ನಮ್ಮ ಪಕ್ಷದಿಂದ ಕೆಲವರು ವಿಧಾನ ಸಭೆಗೆ ಆಯ್ಕೆಯಾದರೆ ಹೋರಾಟಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ಹೇಳಿದರು.

ಸಿಐಟಿಯು ಮತ್ತು ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ಸುರೇಶ್ ಕಲ್ಲಾಗರ ಮಾತನಾಡಿದರು. ಅದ್ಯಕ್ಷತೆಯನ್ನು ಕೆಲಸಗಾರರ ಸಂಘದ ಮುಖಂಡ ಯು.ದಾಸಭಂಡಾರಿ ವಹಿಸಿದ್ದರು. ಸಿದ್ದಾಪುರ ಕಾರ್ಮಿಕ ಮುಖಂಡರಾದ ಅಲೆಕ್ಸಾಂಡರ್, ಗಿರಿಜ, ಜ್ಯೋತಿ, ಗಿರಿಜಮ್ಮ ಶೆಡ್ತಿ, ಸಾಕ, ದ್ಯಾವಮ್ಮ, ಮಂಜುನಾಥ ಕೊಠಾರಿ, ರಾಘವೇಂದ್ರ ಉಪಸ್ಥತರಿದ್ದರು. ವಸಂತ ಸ್ವಾಗತಿಸಿದರು. ವಿಶಾಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News