ಸುಳ್ಯ: ಬೆಂಕಿಗಾಹುತಿಯಾದ ಶಾಲಾ ವಾಹನ

Update: 2018-03-15 05:20 GMT

ಸುಳ್ಯ, ಮಾ.15: ಖಾಸಗಿ ಶಾಲಾ ವಾಹನವೊಂದು ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸಂಪೂರ್ಣ ಉರಿದು ಭಸ್ಮವಾದ ಘಟನೆ ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.

ಸುಳ್ಯ ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ವಾಹನ ಇದಾಗಿದ್ದು, ಅವಘಡದ ವೇಳೆ ಶಾಲಾ ವಾಹನದಲ್ಲಿ ಯಾರು ಇರದ ಕಾರಣ ಸಂಭಾವ್ಯ ಭಾರೀ ದುರಂತ ತಪ್ಪಿದೆ.

 ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಈ ಸ್ಕೂಲ್ ಬಸ್ಸನ್ನು ಅದರ ಚಾಲಕ ತನ್ನ ಮನೆಗೆ ಕೊಂಡೊಯ್ಯುತ್ತಿದ್ದ. ಬೆಳಗ್ಗೆ ತನ್ನ ಮನೆಯಿಂದಲೇ ಹೊರಟು ವಿದ್ಯಾರ್ಥಿಗಳನ್ನು ಹೇರಿಕೊಂಡು ಕೆವಿಜಿ ಶಾಲೆಗೆ ತಲುಪಿಸುತ್ತಿದ್ದ. ಎಂದಿನಂತೆ ನಿನ್ನೆ ಸಂಜೆಯೂ ಬಸ್ಸನ್ನು ಚಾಲಕ ಕೊಂಡೊಯ್ದು ತನ್ನ ಮನೆ ಬಳಿ ನಿಲ್ಲಿಸಿದ್ದ. ಆದರೆ ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಬಸ್ಸಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದ ಇಡೀ ವ್ಯಾಪಿಸಿದ ಬೆಂಕಿ ಕೆನ್ನಾಲಗೆಗೆ ಸಿಲುಕಿ ಬಸ್ ಸಂಪೂರ್ಣ ಉರಿದಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ಬೆಂಕಿ ಅನಾಹುತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿರಬಹುದೆಂದು ಶಂಕಿಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News