ಮಂಗಳೂರು: ಪ್ರೇಕ್ಷಕರಿಲ್ಲದೆ ಸೊರಗಿದ ‘ಸುಗ್ಗಿ-ಹುಗ್ಗಿ’ ಕಾರ್ಯಕ್ರಮ

Update: 2018-03-15 11:07 GMT

ಮಂಗಳೂರು, ಮಾ.15: ದ.ಕ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ತುಳುಭವನದ ‘ಸಿರಿ ಚಾವಡಿ’ಯಲ್ಲಿ ಇಂದು ಆಯೋಜಿಸಲಾಗಿದ್ದ ಸುಗ್ಗಿ-ಹುಗ್ಗಿ ಕಾರ್ಯಕ್ರಮವು ಪ್ರೇಕ್ಷಕರಿಲ್ಲದೆ ಸೊರಗಿತು.

ಜಿಲ್ಲೆಯ ಆಯ್ದ ಹಿರಿಯ ಶ್ರೇಣಿಯ ಕಲಾವಿದರು ಮತ್ತು ತಂಡಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೇಕ್ಷಕರೇ ಇರಲಿಲ್ಲ. ಶಾಲೆಯೊಂದರ ಕೆಲವು ವಿದ್ಯಾರ್ಥಿಗಳು ಮತ್ತು ಕಲಾವಿದರೇ ಪ್ರೇಕ್ಷಕರಾಗಿದ್ದರು. ಆಸಕ್ತಿಯಿಂದ ಬಂದು ವೀಕ್ಷಕಿಸಿದ ಸಾರ್ವಜನಿಕರ ಕೊರತೆ ಎದ್ದು ಕಾಣುತ್ತಿತ್ತು.

ಮೈಸೂರು, ಮೂಡುಬಿದಿರೆ, ಕುಳಾಯಿ, ಕಟೀಲು, ಬಂಟ್ವಾಳ, ಪುತ್ತೂರು, ಸುಳ್ಯ, ಸುರತ್ಕಲ್, ಬೆಳ್ತಂಗಡಿ, ಮುಲ್ಕಿಯ ವಿವಿಧ ಕಲಾತಂಡಗಳಿಂದ ಕರಾವಳಿಯ ಕೃಷಿ ಚಟುವಟಿಕೆಗೆ ಪೂರಕವಾದ ಡೊಳ್ಳು ಕುಣಿತ, ಕಂಸಾಳೆ, ಚೆಂಡೆವಾದನ, ಜಾನಪದ ನೃತ್ಯ, ನಾದಸ್ವರ, ಪೂಜಾ ಕುಣಿತ, ಹುಲಿವೇಷ, ಜನಪದ ಸಂಗೀತ, ಕರಂಗೋಲು, ಸುಗ್ಗಿ ಕುಣಿತ, ಕೃಷಿ ಹಾಡುಗಳು ಮತ್ತು ಸಂದಿ ಪಾಡ್ದಾನ, ಕಂಗೀಲು ನೃತ್ಯ, ಚೆನ್ನು ಕುಣಿತ, ವೀರಗಾಸೆ, ಹಾಲಕ್ಕಿ ಕುಣಿತ, ಯಕ್ಷಗಾನ, ಸುಗ್ಗಿ ಹಾಡುಗಳು ಗಮನ ಸೆಳೆದವು.

*ಶಾಸಕರ ಅಸಮಾಧಾನ: ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದ್ದ ಶಾಸಕ ಜೆ.ಆರ್.ಲೋಬೊ, ಪ್ರೇಕ್ಷಕರೇ ಇಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರಕಾರ ಸಾಹಿತ್ಯ-ಸಂಸ್ಕೃತಿಯ ಬೆಳವಣಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಆದರೆ ಎಲ್ಲೋ ಒಂದೆಡೆ ಅಧಿಕಾರಿ ವರ್ಗ ಅದನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಕಲಾವಿದರು ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರೀಕ್ಷಿಸುತ್ತಾರೆ. ಪ್ರೇಕ್ಷಕರೇ ಇಲ್ಲದ ವೇಳೆ ಕಲಾವಿದರು ಯಾರಿಗೆ ಮತ್ತು ಯಾತಕ್ಕೆ ಕಾರ್ಯಕ್ರಮ ನೀಡಬೇಕು? ಇಂತಹ ಅತ್ಯುತ್ತಮ ಕಾರ್ಯಕ್ರಮವನ್ನು ಜನಸಂದಣಿ ಇರುವ ಸ್ಥಳಗಳಲ್ಲಿ ಆಯೋಜಿಸಬೇಕಿತ್ತು ಎಂದರು.

ವೇದಿಕೆಯಲ್ಲಿ ಕಾರ್ಪೊರೇಟರ್ ರಾಧಾಕೃಷ್ಣ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜೇಂದ್ರ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚಂದ್ರಹಾಸ ರೈ ಬಿ. ಸ್ವಾಗತಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News