ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಪರಿಕರಗಳು ಭಸ್ಮ, 15 ಲಕ್ಷ ರೂ. ನಷ್ಟ

Update: 2018-03-15 13:38 GMT

ಬಂಟ್ವಾಳ, ಮಾ. 15: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆಯೊಂದಕ್ಕೆ ಬೆಂಕಿ ತಗಲಿದ ಪರಿಣಾಮ ಮನೆ ಸಹಿತ ಪರಿಕರಗಳು ಸುಟ್ಟು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ವಿಟ್ಲದ ಪೊನ್ನೋಟ್ಟು ಎಂಬಲ್ಲಿ ಗುರುವಾರ ಸಂಭವಿಸಿದೆ.

ಮೂಲತಃ ಕೇರಳ ನಿವಾಸಿ, ವಿಟ್ಲದ ಚಿನ್ನದ ಮಳಿಗೆಯೊಂದರ ಮಾಲಕ ತಾನಾಜಿ ಎಂಬವರಿಗೆ ಸೇರಿದ ಪೊನ್ನೋಟ್ಟು ಎಂಬಲ್ಲಿರುವ ಮನೆಯಲ್ಲಿ ಈ ಘಟನೆ ಸಂಭವಿಸಿದೆ.

ಬುಧವಾರ ಸಂಜೆ ಸಿಡಿಲಿನ ಅಬ್ಬರಕ್ಕೆ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯಗೊಂಡಿತು. ಬೆಳಿಗ್ಗೆ ವಿದ್ಯುತ್ ಸಂಪರ್ಕ ಬರುತ್ತಿದ್ದಂತೆ ಫ್ರಿಜ್‍ನ ಸ್ವಿಚ್ ಬೋರ್ಡ್‍ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಬಳಿಕ ಮನೆಯ ಅಡಿಗೆ ಕೋಣೆಯೊಳಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಫ್ರಿಜ್ ಭಸ್ಮಗೊಂಡಿದ್ದು, ಮನೆಯ ಮಹಡಿ ಹಾಗೂ ಗೋಡೆ ಬಿರುಕುಬಿಟ್ಟಿದೆ. ಹಲವು ವಿದ್ಯುತ್ ಉಪಕರಣ, ವಯರ್‍ಗಳು ಸೇರಿದಂತೆ ಬೆಲೆಬಾಳುವ ವಸ್ತುಗಳು ಬೆಂಕಿಯ ಕೆನ್ನಾಲಿಗೆ ಭಸ್ಮವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ.
ತದನಂತರ ಮನೆಯೊಳಗಡೆ ಇರಿಸಿದ್ದ ಎರಡು ಅನಿಲ ಸಿಲಿಂಡರ್ ಹೊರಗಡೆ ಎಸೆಯುವ ಮೂಲಕ ಸಂಭವಿಸಲಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಬಳಿಕ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಸಂಭವಿಸಿದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. 

ಘಟನಾ ಸ್ಥಳಕ್ಕೆ ವಿಟ್ಲ ಮೆಸ್ಕಾಂ ಉಪವಿಭಾಗದ ಎಂಜಿನಿಯರ್ ಪ್ರವೀಣ್ ಜೋಷಿ, ಶಾಖಾಧಿಕಾರಿ ವಸಂತ, ವಿಟ್ಲ ಪಪಂ ಅಧ್ಯಕ್ಷ ಅರುಣ್ ಎಂ. ವಿಟ್ಲ, ವಿಟ್ಲ ಗ್ರಾಮಕರಣಿಕ ಪ್ರಕಾಶ್ ಮೊದಲಾದವರು ಭೇೀಟಿ ನೀಡಿ ಪರಿಶೀಲಿಸಿದ್ದಾರೆ. ಈ ಘಟನೆಯಿಂದ 15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News