ಸಿ.ಎಂ. ಉಸ್ತಾದ್ ನಿಗೂಢ ಮರಣ ಪ್ರಕರಣ ಭೇದಿಸಲು ಆಗ್ರಹಿಸಿ ಧರಣಿ

Update: 2018-03-16 13:30 GMT

ಮಂಗಳೂರು, ಮಾ.16: ಮಂಗಳೂರು ಖಾಝಿಯಾಗಿದ್ದ ಸಿ.ಎಂ.ಉಸ್ತಾದ್ ನಿಗೂಢ ಮರಣ ಪ್ರಕರಣವನ್ನು ಭೇದಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಎಸ್ಕೆಎಸೆಸ್ಸೆಫ್ ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು. ಅದಕ್ಕೂ ಮೊದಲು ಬಂದರು ಕೇಂದ್ರ ಜುಮಾ ಮಸೀದಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದ ದ.ಕ.ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ ಖಾಝಿ ಸಿ.ಎಂ.ಉಸ್ತಾದ್ ಅವರನ್ನು ಅತ್ಯಂತ ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ. ಆದರೆ ತನಿಖಾ ತಂಡವು ಕಾಣದ ಕೈಗಳ ಒತ್ತಡಕ್ಕೆ ಮಣಿದು ಆತ್ಮಹತ್ಯೆ ಎಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಇದು ಖಂಡನೀಯ. ಅವರ ಕೊಲೆಯಾಗಿ 8 ವರ್ಷವಾಗಿದೆ. ಈ ಬಗ್ಗೆ ಹಲವು ಬಾರಿ ನಡೆಸಿದ ಹೋರಾಟಕ್ಕೆ ಫಲ ಇಲ್ಲದಂತಾಗಿದೆ. ಆಡಳಿತ ವ್ಯವಸ್ಥೆ ಸರಿಯಿದ್ದಿದ್ದರೆ ನಾವಿಂದು ಈ ರಸ್ತೆಯಲ್ಲಿ ರ್ಯಾಲಿ, ಪ್ರತಿಭಟನಾ ಸಭೆ ನಡೆಸುವ ಆವಶ್ಯಕತೆ ಇರಲಿಲ್ಲ. ತನಿಖಾ ತಂಡವು ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಯದ್ ಅಮೀರ್ ತಂಙಳ್ ವಹಿಸಿದ್ದರು. ಕೇಂದ್ರ ಜುಮಾ ಮಸೀದಿಯ ಖತೀಬ್ ಸ್ವದಖತುಲ್ಲಾ ಫೈಝಿ, ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಖಾಸಿಮ್ ದಾರಿಮಿ ಕಿನ್ಯ, ಅಬ್ದುಲ್ ಅಝೀಝ್ ದಾರಿಮಿ ಕಲ್ಲೆೀಗ, ಅನೀಸ್ ಕೌಸರಿ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಮೊಹಿದಿನಬ್ಬ ಹಾಜಿ, ಮುಹಮ್ಮದ್ ಹನೀಫ್ ಹಾಜಿ, ಮಾಜಿ ಮೇಯರ್ ಕೆ. ಅಶ್ರಫ್, ಸೈಯದ್ ಬಾಷಾ ತಂಙಳ್, ಸಿದ್ದೀಖ್ ಅಬ್ದುಲ್ ಖಾದರ್, ಎಂ ಪಿ.ಮೊಹಿಯುದ್ದೀನ್, ಕೆ.ಎಲ್.ಉಮರ್ ದಾರಿಮಿ, ರಿಯಾಝ್ ಹಾಜಿ ಬಂದರ್, ಅಬ್ದುರ್ರಹ್ಮಾನ್ ದಾರಿಮಿ ತಬೂಕ್, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ರಫೀಕ್ ಹಾಜಿ ಕೊಡಾಜೆ, ಅಬ್ದುಲ್ ಹಮೀದ್, ಅಶ್ರಫ್ ಕೊಳ್ಳೆಜಾಲ್, ಶರೀಫ್ ಮೂಸ ಕುದ್ದುಪದವು, ಇರ್ಷಾದ್ ದಾರಿಮಿ ಬಂಟ್ವಾಳ, ಅಬ್ದುಲ್ ಅಝೀಝ್ ಮಲಿಕ್ ಮೂಡುಬಿದಿರೆ, ಮುಹಮ್ಮದ್ ಹನೀಫ್ ಧೂಮಲಿಕೆ, ನಝೀರ್ ಅಝ್ಝರಿ ಬೆಳ್ತಂಗಡಿ, ಅಬ್ದುಲ್ ರಶೀದ್ ರಹ್ಮಾನಿ, ನೌಶಾದ್ ಹಾಜಿ ಸೂರಲ್ಪಾಡಿ, ಅಬ್ದುಲ್ ಲತೀಫ್ ದಾರಿಮಿ ರೆಂಜಲಾಡಿ, ಜಮಾಲುದ್ದಿನ್ ದಾರಿಮಿ ಕೈಕಂಬ, ಹಕೀಂ ಪರ್ತಿಪ್ಪಾಡಿ, ಇಬ್ರಾಹಿಂ ಬಾತಿಷ್ ತಂಙಳ್, ಹಾರೂನ್ ಅಹ್ಸನಿ, ರಿಯಾಝ್ ರಹ್ಮಾನಿ, ಅಬ್ದುಲ್ ಸಮದ್ ಹಾಜಿ ಕುದ್ರೋಳಿ, ಶಾಹುಲ್ ಹಮೀದ್ ಮೆಟ್ರೋ, ಅದ್ದು ಹಾಜಿ ಮಂಗಳೂರು, ಫಾರೂಕ್ ಉಳ್ಳಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಇಕ್ಬಾಲ್ ಬಾಳಿಲ ಸ್ವಾಗತಿಸಿದರು. ಇಸ್ಮಾಯೀಲ್ ಯಮಾನಿ ತಿಂಗಳಾಡಿ ವಂದಿಸಿದರು.

ಪ್ರತಿಭಟನಾಕಾರರೊಂದಿಗೆ ಎಸ್ಸೈ ಮಾತಿನ ಚಕಮಕಿ
ಮಂಗಳೂರು ಖಾಝಿಯಾಗಿದ್ದ ಸಿ.ಎಂ.ಉಸ್ತಾದ್ ನಿಗೂಢ ಮರಣ ಪ್ರಕರಣದ ಸಿಬಿಐ ತನಿಖೆಯು ಪಾರದರ್ಶಕವಾಗಿರಬೇಕು ಎಂದು ಆಗ್ರಹಿಸಿ ಎಸ್ಕೆಎಸೆಸ್ಸೆಫ್ ನೇತೃತ್ವದಲ್ಲಿ ಶುಕ್ರವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ಎಸ್ಸೈ ಉಮೇಶ್ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆಸಿ ವಿವಾದ ಸೃಷ್ಟಿಸಿದ್ದಾರೆ.

ನಗರದ ಹ್ಯಾಮಿಲ್ಟನ್ ಸರ್ಕಲ್ ಮುಂದಿನ ಬಂದರು ರಸ್ತೆಯು ಕಾಂಕ್ರಿಟೀಕರಣಗೊಳ್ಳುತ್ತಿದ್ದುದರಿಂದ ಈ ಭಾಗದಲ್ಲಿ ಸಂಚಾರದ ಒತ್ತಡವಿದೆ. ಪ್ರತಿಭಟನಾ ಸಭೆ ನಡೆಸಲು ಸ್ಥಳದ ಕೊರತೆಯೂ ಇದೆ. ಈ ಮಧ್ಯೆ ಎಸ್ಕೆಎಸೆಸ್ಸೆಫ್ ಸಂಘಟನೆಯು ಪೊಲೀಸ್ ಇಲಾಖೆಯು ಅನುಮತಿಯೊಂದಿಗೆ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾಗ ಕರ್ತವ್ಯ ನಿರತ ಎಸ್ಸೈ ಉಮೇಶ್ ‘ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದು ಯಾತಕ್ಕೆ ಎಂದು ಪ್ರಶ್ನಿಸಿ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು. ಇಷ್ಟೊಂದು ಮಂದಿ ಸೇರುವಾಗ ರಸ್ತೆ ತಡೆ ಆಗುವುದು ಸಹಜ. ನಾವು ಇಲ್ಲಿ ಅನುಮತಿ ಪಡೆದೇ ಪ್ರತಿಭಟನೆ ಮಾಡುವುದು ಎಂದು ಪ್ರತಿಭಟನಾಕಾರರು ಕೂಡ ತಿರುಗೇಟು ನೀಡಿದರು. ಇದರಿಂದ ಕೆಲಕಾಲ ಎಸ್ಸೈ ಹಾಗೂ ಪ್ರತಿಭಟನಾಕಾರರ ಜೊತೆ ಮಾತಿನ ಚಕಮಕಿ ನಡೆಯಿತು. ಆದರೆ, ಅತ್ತ ಪ್ರತಿಭಟನಾ ಭಾಷಣ ಮಾಡುತ್ತಿದ್ದ ಕಾರಣ ಹೆಚ್ಚಿನ ಜನರಿಗೆ ಈ ವಿಷಯ ತಿಳಿಯಲಿಲ್ಲ.
 

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News