ತುಂಬೆ ಅಣೆಕಟ್ಟಿನಲ್ಲಿ 5.6 ಮೀಟರ್ ನೀರು

Update: 2018-03-16 13:39 GMT

ಮಂಗಳೂರು, ಮಾ.16: ತುಂಬೆ ನೂತನ ಅಣೆಕಟ್ಟಿನಲ್ಲಿ 5.6 ಮೀಟರ್ ಎತ್ತರಕ್ಕೆ ನೀರು ಸಂಗ್ರಹವಿದ್ದು, ಇದನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಳಕೆದಾರರಿಗೆ 47 ದಿನಗಳವರೆಗೆ ಪೂರೈಸಬಹುದಾಗಿದೆ ಎಂದು ವೆುೀಯರ್ ಭಾಸ್ಕರ ಮೊಯ್ಲಿ ತಿಳಿಸಿದರು.

ತುಂಬೆ ಅಣೆಕಟ್ಟಿಗೆ ಇಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಹಾಗೂ ಇತರ ಸದಸ್ಯರು, ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅಣೆಕಟ್ಟಿನಲ್ಲಿ ನೀರಿನ ಮಟ್ಟದಲ್ಲಿ 3 ಸೆ.ಮೀ.ನಷ್ಟು ಏರಿಕೆಯಾಗಿದೆ. ಪ್ರಸ್ತುತ ಲುಮಾಪು 8 ಎಂಸಿಎಂ (ಮಿಲಿಯನ್ ಕ್ಯೂಬಿಕ್ ಮೀಟರ್) ನೀರು ಸಂಗ್ರಹವಿದೆ ಎಂದು ಅವರು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಪ್ರಸ್ತುತ ಬೇಸಿಗೆ ಅವಧಿಯಲ್ಲಿ ಮೇ ಅಂತ್ಯದವರೆಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆಯಾಗದ ರೀತಿಯಲ್ಲಿ ಹಾಗೂ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಮುಂಜಾಗರೂಕತೆ ವಹಿಸಲಾಗಿದೆ ಎಂದು ಅವರು ಹೇಳಿದರು.

ಎ.ಎಂ.ಆರ್. ಅಣೆಕಟ್ಟಿನಲ್ಲಿ ಪಸ್ತುತ 18.50 ಮೀಟರ್ ಎತ್ತರಕ್ಕೆ ಒಟ್ಟು 9.17 ಎಂಸಿಎಂ ಸಾಮರ್ಥ್ಯದ ನೀರು ಸಂಗ್ರಹವಿದೆ. ತುಂಬೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವ ಸಂದರ್ಭದಲ್ಲಿ ಎಎಂಆರ್ ಡ್ಯಾಂ ನೀರನ್ನು ಬಿಡುಗಡೆ ಮಾಡಿ ಪಾಲಿಕೆ ವ್ಯಾಪ್ತಿಗೆ ಪೂರೈಸಲಾಗುವುದು. ಆದ್ದರಿಂದ ಮೇ ಅಂತ್ಯದವರೆಗೆ ಪಾಲಿಕೆಯಲ್ಲಿ ಯಥಾಸ್ಥಿತಿಯಲ್ಲಿ ನೀರು ಪೂರೈಕೆ ಮಾಡಲಾಗುವುದು. ತುಂಬೆ ಅಣೆಕಟ್ಟಿನಲ್ಲಿ 5 ಮೀಟರ್ ಎತ್ತರಕ್ಕೆ ನೀರು ನಿಲುಗಡೆ ಮಾಡಿದಾಗ 28 ಭೂ ಮಾಲಿಕರಜಮೀನು ಮುಳುಗಡೆಯಾಗಿ ಅವರಿಗೆ ಒಟ್ಟು 7 ಕೋಟಿ ರೂ. ಪರಿಹಾರ ಬಿಡುಗಡೆಯಾಗಿತ್ತು. ಅವರಲ್ಲಿ 12 ಮಂದಿಗೆ 4 ಕೋಟಿ ರೂ. ಪರಿಹಾರ ಧನ ನೀಡಲಾಗಿದೆ. ಉಳಿದವರ ಜಮೀನಿಗೆ ಸಂಬಂಧಿಸಿ ದಾಖಲೆ ಪತ್ರಗಳ ದೋಷದಿಂದಾಗಿ ತೊಂದರೆಯಾಗಿದ್ದು, ಹಣವನ್ನು ಮುಳುಗಡೆ ರೈತರ ಪರಿಹಾರ ಧನವಾಗಿ ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಪ್ರಸ್ತುತ 6 ಮೀಟರ್ ಎತ್ತರಕ್ಕೆ ನೀರು ನಿಲುಗಡೆ ಮಾಡಲಾಗಿದ್ದು, ಇದರಿಂದ 36 ಭೂ ಮಾಲಕರ 30 ಎಕರೆ ಖಾಸಗಿ ಜಮೀನು ಮುಳುಗಡೆಯಾಗುತ್ತದೆ. ಅವರಿಗೆ 10 ಕೋಟಿ ರೂ. ಪರಿಹಾರ ಧನ ಬಿಡುಗಡೆಯಾಗಿದ್ದು, ಸರ್ವೆ ಕಾರ್ಯ ನಡೆದಿದೆ. ದಾಖಲೆಗಳನ್ನು ಸಂಗ್ರಹಿಸಿ ಪರಿಹಾರ ವಿತರಣೆ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.

ಈ ಸಂದರ್ಭ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ, ಉಪ ಮೇಯರ್ ಮುಹಮ್ಮದ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸದಸ್ಯರಾದ ಲತೀಫ್, ಅಶೋಕ್ ಡಿ.ಕೆ., ಅಪ್ಪಿ, ಸಬಿತಾ ಮಿಸ್ಕಿತ್, ಆಯುಕ್ತರಾದ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News