ಅವಿಶ್ವಾಸ ನಿರ್ಣಯಕ್ಕೆ ಸ್ಪೀಕರ್ ಬ್ರೇಕ್

Update: 2018-03-16 15:16 GMT

ಹೊಸದಿಲ್ಲಿ,ಮಾ.16: ಕೇಂದ್ರದ ಮೋದಿ ಸರಕಾರದ ವಿರುದ್ಧ ಆಂಧ್ರದ ರಾಜಕೀಯ ಪಕ್ಷಗಳಾದ ವೈಎಸ್‌ಆರ್ ಕಾಂಗ್ರೆಸ್ ಹಾಗೂ ತೆಲುಗುದೇಶಂ ಪಕ್ಷಗಳು ನೀಡಿದ್ದ ಅವಿಶ್ವಾಸ ನಿರ್ಣಯದ ನೋಟಿಸ್‌ನ್ನು ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲು ಸ್ಪೀಕರ್ ಶುಕ್ರವಾರ ನಿರಾಕರಿಸಿದ್ದಾರೆ. ಸದಸ್ಯರು ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರತಿಭಟನೆ ಹಾಗೂ ಗದ್ದಲದಲ್ಲಿ ನಿರತರಾದ ಕಾರಣ, ಕಲಾಪವನ್ನು ನಡೆಸುವುದೇ ಅಸಾಧ್ಯವಾಗಿದೆಯೆಂದು ಕಾರಣ ನೀಡಿ, ಸ್ಪೀಕರ್ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಸದನದಲ್ಲಿ ಕಲಾಪವು ಕ್ರಮಬದ್ಧವಾಗಿಲ್ಲದಿರುವುದರಿಂದ, ನಿರ್ಣಯವನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲವೆಂದು ಮಹಾಜನ್ ತಿಳಿಸಿದರು.

 ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ನಿರಾಕರಿಸಿದ್ದ ಎನ್‌ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅನುಮತಿ ಕೋರಿ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಪ್ರತ್ಯೇಕವಾಗಿ ನೋಟಿಸ್ ನೀಡಿದ್ದವು.

ಸುಮಾರು ನಾಲ್ಕು ವರ್ಷಗಳ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರಕಾರದ ವಿರುದ್ಧ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ನೋಟಿಸ್ ನೀಡಲಾಗಿದೆ.

ವೈಎಸ್‌ಆರ್ ಕಾಂಗ್ರೆಸ್‌ನ ವೈ.ವಿ.ಸುಬ್ಬಾ ರೆಡ್ಡಿ ಹಾಗೂ ಟಿಡಿಪಿಯ ತೋಟ ನರಸಿಂಹಂ ಅವರು ಅವಿಶ್ವಾಸ ನಿರ್ಣಯದ ನೋಟಿಸ್ ಮಂಡಿಸಿದ್ದರು.

 ಇಂದು ಸದನ ಆರಂಭವಾಗುತ್ತಿದ್ದಂತೆಯೇ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಹಾಗೂ ಬ್ಯಾಂಕಿಂಗ್ ಹಗರಣ ಸೇರಿದಂತೆ ಟಿಡಿಪಿ,ವೈಎಸ್‌ಆರ್ ಕಾಂಗ್ರೆಸ್, ಎಡಿಎಂಕೆ ಹಾಗೂ ಆರ್‌ಜೆಡಿ ಪಕ್ಷಗಳು ವಿವಿಧ ವಿಷಯಗಳ ಬಗ್ಗೆ ಪ್ರತಿಭಟನೆ ಹಾಗೂ ಘೋಷಣೆಯಲ್ಲಿ ನಿರತರಾದ ಬಳಿಕ ಲೋಕಸಭೆಯಲ್ಲಿ ಭಾರೀ ಗದ್ದಲ ತಲೆದೋರಿತ್ತು.

 ಕಾಂಗ್ರೆಸ್ ಸದಸ್ಯರು ಕೂಡಾ ಆಸನದಿಂದ ಎದ್ದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

  ಶೂನ್ಯ ವೇಳೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕೋರುವ ನೋಟಿಸ್ ತನಗೆ ಬಂದಿರುವುದಾಗಿ ತಿಳಿಸಿದರು. ಸದನದಲ್ಲಿ ಶಿಸ್ತು ಇದ್ದಲ್ಲಿ ನೋಟಿಸ್‌ನ್ನು ಕೈಗೆತ್ತಿಕೊಳ್ಳುವುದು ನನ್ನ ಕರ್ತವ್ಯವಾಗಿದೆ ಎಂದು ಅವರು ಪ್ರತಿಪಕ್ಷ ಸದಸ್ಯರ ಘೋಷಣೆಯ ಮಧ್ಯೆ ಹೇಳಿದರು.

ಸದನದ ಮುಂದಿನ ಅಂಗಣಕ್ಕೆ ಧಾವಿಸಿರುವ ಸದಸ್ಯರೆಲ್ಲರೂ ತಮ್ಮ ಆಸನಗಳಿಗೆ ತೆರಳುವಂತೆ ಸ್ಪೀಕರ್ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಮಹಾಜನ್ ಅವರು ಸದನದಲ್ಲಿ ಸುವ್ಯವಸ್ಥೆ ಇಲ್ಲದಿರುವುದರಿಂದ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು.

 ಬಜೆಟ್ ಅಧಿವೇಶನದ ಮಧ್ಯಂತರ ಬಿಡುವಿನ ಬಳಿಕ ಮಾರ್ಚ್ 5ರಿಂದ ಸಂಸತ್ ಕಲಾಪ ಮತ್ತೆ ಆರಂಭಗೊಂಡ ದಿನದಿಂದ ಲೋಕಸಭೆಯಲ್ಲಿ ನಿರಂತರವಾಗಿ ಪ್ರತಿಪಕ್ಷ ಸದಸ್ಯರ ಗದ್ದಲ, ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News