ಪಂಜಾಬ್‌ನ ಆಪ್ ಅಧ್ಯಕ್ಷ ಮಾನ್ ರಾಜೀನಾಮೆ

Update: 2018-03-16 15:22 GMT

ಚಂಡೀಗಢ,ಮಾ.16: ಪಂಜಾಬ್‌ನ ಶಿರೋಮಣಿ ಅಕಾಲಿದಳದ ನಾಯಕ ಹಾಗೂ ಪಂಜಾಬ್‌ನ ಮಾಜಿ ಸಚಿವ ಬಿಕ್ರಮ್ ಸಿಂಗ್ ಮಂಜಿಥಾ ವಿರುದ್ಧ ಮಾದಕದ್ರವ್ಯ ಜಾಲದಲ್ಲಿ ಶಾಮೀಲಾಗಿದ್ದಾರೆಂಬ ಆರೋಪ ಮಾಡಿದ್ದಕ್ಕಾಗಿ ಅವರಲ್ಲಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕ್ಷಮೆಯಾಚಿಸಿದ ಮರುದಿನವೇ ಸಂಗ್ರೂರ್ ಸಂಸದ ಭಗವಂತ್ ಸಿಂಗ್ ಮಾನ್ ಆಪ್ ನ ಪಂಜಾಬ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 ಮಂಜಿಥಾರೊಂದಿಗೆ ದಿಲ್ಲಿ ಮುಖ್ಯಮಂತ್ರಿಯ ಕ್ಷಮಾಯಾಚನೆಗೆ ಪಂಜಾಬ್‌ನಲ್ಲಿರುವ ಪಕ್ಷದ ಶಾಸಕರು ಹಾಗೂ ನಾಯಕರಿಂದಲೂ ತೀವ್ರವಾದ ವಿರೋಧ ವ್ಯಕ್ತವಾಗಿದೆ. ಮಂಜಿಥಾರಲ್ಲಿ ಕೇಜ್ರಿವಾಲ್ ಕ್ಷಮೆಯಾಚನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಭಗವಂತ್ ಮಾನ್ ಅವರು ಟ್ವಿಟರ್‌ನಲ್ಲಿ ತನ್ನ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.

  “ಪಂಜಾಬ್ ಎಎಪಿಯ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಆದರೆ ಪಂಜಾಬ್‌ನ ಡ್ರಗ್ ಮಾಫಿಯಾ ಹಾಗೂ ಎಲ್ಲಾ ವಿಧ ಭ್ರಷ್ಟಾಚಾರಗಳ ವಿರುದ್ಧ ಪಂಜಾಬ್‌ನ ಆಮ್ ಆದ್ಮಿಯಾಗಿ ನನ್ನ ಹೋರಾಟ ಮುಂದುವರಿಯಲಿದೆಯೆಂದು” ಅವರು ಟ್ವೀಟ್ ಮಾಡಿದ್ದಾರೆ.

ಬಿಕ್ರಮ್ ಸಿಂಗ್ ಮಂಜಿಥಾ ಅವರು ಮಾದಕದ್ರವ್ಯ ಮಾರಾಟದಲ್ಲಿ ಶಾಮೀಲಾಗಿದ್ದಾರೆಂಬ ಆರೋಪಗಳನ್ನು ತಾನು ಹೊರಿಸಿದ್ದಕ್ಕಾಗಿ ಕೇಜ್ರಿವಾಲ್ ಗುರುವಾರ ಕ್ಷಮೆಯಾಚಿಸಿದ್ದ ಕೇಜ್ರಿವಾಲ್ ಅವರು ಈ ಆರೋಪಗಳಲ್ಲಿ ಹುರುಳಿಲ್ಲವೆಂದು ತನಗೆ ಮನವರಿಕೆಯಾಗಿರುವುದಾಗಿ ತಿಳಿಸಿದರು.

  ಪಂಜಾಬ್‌ನ ಇತರ ಆಪ್ ನಾಯಕರಿಂದಲೂ ಕೇಜ್ರಿವಾಲ್ ಕ್ಷಮೆಯಾಚನೆಗೆ ಖಂಡನೆ ವ್ಯಕ್ತವಾಗಿದೆ. ಕೇಜ್ರಿವಾಲ್ ಅವರ ಕ್ಷಮೆಯಾಚನೆಯಿಂದ ತನಗೆ ಆಘಾತವಾಗಿರುವುದಾಗಿ ಪಂಜಾಬ್‌ನ ಪ್ರತಿಪಕ್ಷ ನಾಯಕ ಸುಖ್‌ಪಾಲ್ ಸಿಂಗ್ ಖೈರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News