×
Ad

ನ್ಯಾ. ಲೋಯಾ ಸಾವಿನ ಪ್ರಕರಣದಲ್ಲಿ ಅಮಿತ್ ಶಾರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಮಹಾರಾಷ್ಟ್ರ ಸರಕಾರ

Update: 2018-03-16 22:27 IST

ಹೊಸದಿಲ್ಲಿ, ಮಾ.16: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ಸಾವಿನ ಕುರಿತು ತನಿಖೆಗೆ ಕೋರಲಾಗುತ್ತಿದೆ ಎಂದು ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

  ಮಹಾರಾಷ್ಟ್ರ ಸರಕಾರದ ಪರ ವಾದ ಮಂಡಿಸಿದ ಕೇಂದ್ರ ಸರಕಾರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಅಮಿತ್ ಶಾರನ್ನು ಗುರಿಯಾಗಿರಿಸಿಕೊಂಡು ಮತ್ತು ಈ ಪ್ರಕರಣವನ್ನು ಜೀವಂತವಾಗಿರಿಸಿಕೊಳ್ಳುವ ಏಕೈಕ ಉದ್ದೇಶದಿಂದ ಈ ಕೋರಿಕೆ ಮಂಡಿಸಲಾಗಿದೆ ಎಂದರು. ಸುಪ್ರೀಂಕೋರ್ಟ್ ಹೇಳುವ ಒಂದು ‘ಪದ’ವು ನ್ಯಾಯಾಧೀಶ ಲೋಯಾ ಮೃತಪಟ್ಟ ಸಂದರ್ಭದಲ್ಲಿ ಅವರ ಜತೆಗಿದ್ದ ನಾಲ್ವರು ನ್ಯಾಯಾಧೀಶರ ಬಗ್ಗೆ ಸಂಶಯ ಹುಟ್ಟುಹಾಕಬಹುದು ಎಂದು ರೋಹಟ್ಗಿ ಹೇಳಿದರು.

ಇದೊಂದು ಸೂಕ್ಷ್ಮಪ್ರಕರಣವಾಗಿದ್ದು ತನಿಖೆಗೆ ಆದೇಶಿಸಿದರೆ ಆಗ ನ್ಯಾಯಾಧೀಶರು ಸಾಕ್ಷಿಗಳಾಗುತ್ತಾರೆ ಎಂದು ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಲೋಯಾ 2014ರಲ್ಲಿ ಹೋಟೆಲ್ ರೂಂನಲ್ಲಿ ಮೃತಪಟ್ಟಿದ್ದರು. ಲೋಯಾ ನಿಧನದ ಬಳಿಕ ವಿಚಾರಣೆಯ ಹೊಣೆ ಹೊತ್ತುಕೊಂಡಿದ್ದ ಹೊಸ ನ್ಯಾಯಾಧೀಶರು ಸೊಹ್ರಾಬುದ್ದೀನ್ ಕೊಲೆ ಪ್ರಕರಣದಲ್ಲಿ ಶಾರನ್ನು ಖುಲಾಸೆಗೊಳಿಸಿದ್ದರು.

  ನ್ಯಾ.ಲೋಯಾ ಸಾವಿನ ಬಗ್ಗೆ ಕುಟುಂಬದ ಸದಸ್ಯರು ಶಂಕೆ ವ್ಯಕ್ತಪಡಿಸಿದ ಬಳಿಕ, ಪ್ರಕರಣದ ಸ್ವತಂತ್ರ ತನಿಖೆಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತೆ ತೆಹ್ಸೀನ್ ಪೂನಾವಾಲಾ , ಪತ್ರಕರ್ತ ಬಿ.ಎಸ್.ಲೋನ್ ಹಾಗೂ ಇತರರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News