'ಸಾವಯವ ಕೃಷಿ ಮತ್ತು ಕಾಂಪೋಸ್ಟ್ ಗೊಬ್ಬರ ತಯಾರಿ' ಕಾರ್ಯಾಗಾರ

Update: 2018-03-17 13:56 GMT

ಮೂಡುಬಿದಿರೆ, ಮಾ.17 : ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರ, ತೋಟಗಾರಿಕಾ ಇಲಾಖೆ ಮಂಗಳೂರು, ಎಂ.ಸಿ.ಎಸ್ ಬ್ಯಾಂಕ್  ಹಾಗೂ ಇನ್ನರ್‍ವೀಲ್ ಕ್ಲಬ್ ಮೂಡುಬಿದಿರೆ ಇವುಗಳ ಆಶ್ರಯದಲ್ಲಿ 'ಸಾವಯವ ಕೃಷಿ ಮತ್ತು ಕಾಂಪೋಸ್ಟ್ ಗೊಬ್ಬರ ತಯಾರಿ' ಕುರಿತ ಕಾರ್ಯಾಗಾರವು ಶನಿವಾರ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆಯಿತು. 

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಕಾರ್ಯಾಗಾರವನ್ನು ಉದ್ಘಾಟಿಸಿ, ಮತದಾನ ಜಾಗೃತಿಯನ್ನು ಮೂಡಿಸುವ ಕರಪತ್ರವನ್ನು ಅನಾವರಣಗೊಳಿಸಿ ಮಾತನಾಡಿ ಸಾವಯವ ಕೃಷಿಯು ಮನುಷ್ಯನ ಆರೋಗ್ಯಕ್ಕೆ ಉತ್ತಮ. ಹಿಂದೆ ಎಲ್ಲರೂ ಕಾಂಪೋಸ್ಟ್ ಗೊಬ್ಬರವನ್ನೇ ತಯಾರಿಸಿ ಕೃಷಿಯನ್ನು ಮಾಡುತ್ತಿದ್ದರು. ಆದರೆ ಇಂದು ಅಧಿಕ ಇಳುವರಿ ಮತ್ತು ಹಣದ ಆಸೆಗಾಗಿ  ಕೃಷಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ ಇದು ಸರಿಯಲ್ಲ ಎಂದು ಹೇಳಿದ ಅವರು ಮತದಾನ ಮಾಡುವುದು ಎಲ್ಲರ ಹಕ್ಕು ಆದ್ದರಿಂದ ಎಲ್ಲರೂ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು. 

ಕೃಷಿ ವಿವಿ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಸಕ ಕೆ.ಅಭಯಚಂದ್ರ ಜೈನ್ ರೈತರಿಗೆ ತರಕಾರಿ ಬೀಜವನ್ನು ವಿತರಿಸಿದರು.

ಸನ್ಮಾನ : ಎಂಸಿಎಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಎಪ್ರಿಲ್ ತಿಂಗಳಿನಲ್ಲಿ ನಿವೃತ್ತಿ ಹೊಂದಲಿರುವ ಚಂದ್ರಶೇಖರ ಎಂ. ಅವರನ್ನು ಕೃಷಿ ವಿವಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. 

ಹಿರಿಯ ಕೃಷಿ ತಜ್ಞ ಡಾ.ಎಲ್.ಸಿ.ಸೋನ್ಸ್, ಇನ್ನರ್‍ವೀಲ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಮಂಗಳೂರು ತೋಟಗಾರಿಕಾ ಇಲಾಖೆಯ ನಿರ್ದೇಶಕ ಪ್ರದೀಪ್ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಕೃಷಿಕ ದಯಾನಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸುಜಾತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಿನೇಂದ್ರ ಜೈನ್ ವಂದಿಸಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸುರತ್ಕಲ್‍ನ ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ ಲತೀಫ್ ಅವರು ಸಾವಯವ ಕೃಷಿಯ ಬಗ್ಗೆ ಮತ್ತು ಮಂಗಳೂರು ಕೆ.ವಿ.ಕೆ ಯ ಬೇಸಾಯಶಾಸ್ತ್ರದ ವಿಷಯ ತಜ್ಞ ಹರೀಶ್ ಶೆಣೈ ಕಾಂಪೋಸ್ಟ್ ಗೊಬ್ಬರದ ಬಗ್ಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News