ಫ್ಯಾಶಿಸಂ ವಿರುದ್ಧ ರಾಜಕೀಯ ಏಕತೆಗೆ ಪಿಎಫ್‌ಐ ಶ್ಲಾಘನೆ

Update: 2018-03-18 08:15 GMT

ಕಲ್ಲಿಕೋಟೆ, ಮಾ.18: ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭಾ ಉಪ ಚುನಾವಣೆಯ ಫಲಿತಾಂಶಕ್ಕೆ ಕ್ಯಾಲಿಕಟ್‌ನಲ್ಲಿ ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಇ. ಅಬೂಬಕರ್ ಅಧ್ಯಕ್ಷತೆಯಲ್ಲಿ ನಡೆದ ಪಿಫ್‌ಐ ರಾಷ್ಟ್ರೀಯ ಸೆಕ್ರೆಟರಿಯೇಟ್ ಸಭೆಯು ಶ್ಲಾಘಿಸಿದೆ.

 ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದಾಗಿ ಕಾರ್ಯನಿರ್ವಹಿಸಲು ಹಿಂಜರಿಯುತ್ತಿರುವಾಗ, ಪ್ರಾದೇಶಿಕ ಪಕ್ಷಗಳಾದ ಎಸ್ಪಿಮತ್ತು ಬಿಎಸ್ಪಿಒಂದಾಗುವ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿರುವುದು ಆದರ್ಶಪ್ರಾಯವಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ. ಜಾತ್ಯತೀತ ಪಕ್ಷಗಳು ಐಕ್ಯರಾಗಲು ಸಿದ್ಧವಾದರೆ ಬಿಜೆಪಿಯು ಅಜೇಯವಲ್ಲ ಎಂಬುದನ್ನು ಈ ಒಗ್ಗಟ್ಟು ಸಾಬೀತುಪಡಿಸಿದೆ. ಗೋರಖ್‌ಪುರದಂತಹ ಕೋಟೆಯಲ್ಲಿ ಬಿಜೆಪಿಗಾದ ಸೋಲು, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿಯ ನೀತಿಗಳೊಂದಿಗೆ ಜನರು ಭ್ರಮನಿರಸನಗೊಂಡಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ ಬಿಹಾರ ಚುನಾವಣಾ ಫಲಿತಾಂಶವು ಎನ್‌ಡಿಎಯೊಂದಿಗೆ ಕೈಜೋಡಿಸುವ ಮೂಲಕ ಬಿಹಾರದ ಜನತೆಯನ್ನು ವಂಚಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ಅವಕಾಶವಾದಿ ರಾಜಕಾರಣಕ್ಕೆ ನೀಡಿದ ಎಚ್ಚರಿಕೆಯಾಗಿದೆ.

*ಸ್ಟೀಫನ್ ಹಾಕಿಂಗ್‌ಗೆ ಸಂತಾಪ
ಮಾ.14ರಂದು ನಿಧನರಾದ ಜಗದ್ವಿಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್‌ರಿಗೆ ರಾಷ್ಟ್ರೀಯ ಸೆಕ್ರೇಟರಿಯೇಟ್ ಸಭೆಯು ಸಂತಾಪ ಸೂಚಿಸಿದೆ. ತನ್ನ ಯೌವ್ವನದ ಪ್ರಮುಖ ಘಟ್ಟದಲ್ಲಿ ಬಾಧಿಸಿದ ಕಾಯಿಲೆಯಿಂದಾಗಿ ಅವರ ಇಡೀ ಶರೀರವು ವಿಕಲಾಂಗವಾದರೂ ಅವರ ಕನಸನ್ನು ವಾಸ್ತವಗೊಳಿಸಲು ಅದು ಎಂದೂ ತಡೆಯಾಗಲಿಲ್ಲ. ಹಾಕಿಂಗ್‌ರ ಅಗಲಿಕೆಯು ಜಗತ್ತು ಕೇವಲ ಓರ್ವ ವಿಜ್ಞ್ಞಾನಿಯನ್ನು ಕಳೆದುಕೊಂಡಿದ್ದಲ್ಲ. ಮನುಷ್ಯನ ಮೆದುಳಿಗೆ ಬೆಳಕು ನೀಡಿದ ಜೊತೆಗೆ ಅಮೆರಿಕಾದ ವಸಾಹತುಶಾಹಿ ಆಕ್ರಮಣಗಳು ಮತ್ತು ಫೆಲೆಸ್ತೀನ್‌ರ ಮೇಲಿನ ಝಿಯೋನಿಸ್ಟ್ ದಾಳಿಗಳ ವಿರುದ್ಧ ಧ್ವನಿ ಎತ್ತುತ್ತಿದ್ದ ಮಾನವತಾವಾದಿಯನ್ನೂ ಕಳೆದುಕೊಂಡಿದೆ ಎಂದು ಸಭೆಯು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News