ಚುನಾವಣೆ ಹಿನ್ನೆಲೆ: ದ.ಕ. ಜಿಲ್ಲಾದ್ಯಂತ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ

Update: 2018-03-18 17:02 GMT

ಮಂಗಳೂರು, ಮಾ.18: ರಾಜ್ಯ ವಿಧಾನ ಸಭೆಗೆ ಮೇಯಲ್ಲಿ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಸ್ವಕ್ಷೇತ್ರಗಳಲ್ಲೇ ಹೆಚ್ಚು ಓಡಾಟ ಆರಂಭಿಸಿದ್ದಾರೆ. ರಸ್ತೆ, ಕುಡಿಯುವ ನೀರು ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ, ಹಕ್ಕುಪತ್ರ ವಿತರಣೆ, ರೇಶನ್ ಕಾರ್ಡ್ ವಿತರಣೆ, ಪಕ್ಷದ ಕಾರ್ಯಕ್ರಮ, ಅಹವಾಲು ಸ್ವೀಕಾರ ಇತ್ಯಾದಿ ಚುಟವಟಿಕೆಗಳಲ್ಲಿ ಮಗ್ನರಾಗಿದ್ದಾರೆ. ಬಿಜೆಪಿ ಕೂಡ ಇದಕ್ಕೆ ಹೊರತಾಗಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಅಥವಾ ಆದ ಕಾಮಗಾರಿಗಳ ಉದ್ಘಾಟನೆ ಮಾಡುವ ‘ಭಾಗ್ಯ’ ಸಿಗದಿದ್ದರೂ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಸರಕಾರದ ಕಾರ್ಯವೈಖರಿ, ಸಚಿವರು-ಶಾಸಕರ ವಿರುದ್ಧ ಆರೋಪದ ಸುರಿಮಳೆ ಹೊರಿಸುತ್ತಿದೆ. ಸೂಕ್ಷ್ಮವಿಚಾರಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವಲ್ಲಿಯೂ ಹೆಜ್ಜೆ ಹಾಕಿದೆ.

ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮತ್ತು ಕಾಂಗ್ರೆಸ್‌ನ ಅಬ್ದುಲ್ ಸತ್ತಾರ್ ಅವರ ನಡುವಿನ ‘ಜಗಳ’ಕ್ಕೆ ಸಂಬಂಧಿಸಿ ದುರ್ಗಾವಾಹಿನಿಯು ಮಧ್ಯೆ ಪ್ರವೇಶಿಸಿದೆ. ಸಂಘ ಪರಿವಾರದ ವಿರುದ್ಧ ಕಾರ್ಕಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುಡುಗಿದ್ದ ಪ್ರತಿಭಾ ಕುಳಾಯಿಯ ವಿರುದ್ಧವೇ ಸೆಟೆದು ನಿಂತಿದ್ದ ಸಂಘ ಪರಿವಾರವು ಇದೀಗ ‘ಜಗಳ’ದ ವಿಷಯದಲ್ಲಿ ಪ್ರತಿಭಾ ಕುಳಾಯಿಯ ಪರ ನಿಂತಿದೆ. ಇನ್ನು ಕರಿಂಜೆ ಶ್ರೀಯನ್ನು ಶಾಸಕ ಅಭಯಚಂದ್ರ ಜೈನ್ ಅವಮಾನಿಸಿದ್ದಾರೆ ಎಂದು ಆರೋಪಿಸಿ ಶ್ರೀಯ ಪರ ನಿಂತಿರುವ ವಿಹಿಂಪ ಮಾ.19ರಂದು ಶಾಸಕರ ವಿರುದ್ಧ ಮೂಡುಬಿದಿರೆಯಲ್ಲಿ ಪ್ರತಿಭಟನೆಯನ್ನು ಆಯೋಜಿಸಿದೆ. ಆದಾಗ್ಯೂ ಇದು ರಾಜಕೀಯ ಪ್ರೇರಿತ ಪ್ರತಿಭಟನೆ ಅಲ್ಲ ಎಂದು ಸಮಜಾಯಿಷಿ ನೀಡಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ಕರಾವಳಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ್ದಾರೆ. ಮಾ.20ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಕರಾವಳಿಗೆ ಭೇಟಿ ನೀಡುತ್ತಿದ್ದಾರೆ. ಭೇಟಿಯ ಯಶಸ್ವಿಗೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ರಾಹುಲ್ ಗಾಂಧಿಯನ್ನು ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಪ್ರಮುಖ ಜಂಕ್ಷನ್, ಮುಖ್ಯರಸ್ತೆಗಳ ಇಕ್ಕಡೆಗಳಲ್ಲಿ ಅಳವಡಿಸಿದ್ದಾರೆ.

ಕಾಂಗ್ರೆಸ್‌ನಿಂದ ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಕ್ಷೇತ್ರದಲ್ಲಿ ಹಾಲಿ ಶಾಸಕರೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಮೀಸಲು ಕ್ಷೇತ್ರವಾದ ಸುಳ್ಯ ಹಾಗೂ ಮೂಡುಬಿದಿರೆ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಎಂಬುದು ಅಂತಿಮಗೊಂಡಿಲ್ಲ. ಮೂಡುಬಿದಿರೆಯ ಹಾಲಿ ಶಾಸಕ ಅಭಯಚಂದ್ರ ಜೈನ್ ಯುವಕರಿಗೆ ‘ಕೈ’ಟಿಕೆಟ್ ಕೊಡುವುದಿದ್ದರೆ ತ್ಯಾಗಕ್ಕೆ ಸಿದ್ಧ ಎಂದ ಕಾರಣ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಸ್ಪರ್ಧೆಗೆ ಒಲವು ತೋರಿ ತೆರೆಮರೆಯ ಸಿದ್ಧತೆ ನಡೆಸಿದ್ದರು. ಅದಕ್ಕೆ ಪರ್ಯಾಯವಾಗಿ ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಮೂಡುಬಿದಿರೆಯಲ್ಲಿ ಜನಸ್ಪಂದನ ಎಂಬ ಹೆಸರಿನ ಕಚೇರಿಯೊಂದನ್ನು ತೆರೆದು ಪಕ್ಷದ ಹೈಕಮಾಂಡ್‌ನ ಗಮನ ಸೆಳೆಯುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮಂಗಳೂರಿನ ನಿಕಟಪೂರ್ವ ಮೇಯರ್ ಕವಿತಾ ಸನಿಲ್ ಮೂಡುಬಿದಿರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಅದಕ್ಕಾಗಿ ಹೊಸದಿಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ವಿಚಾರವಾಗಿ ಪಿಲಿಕುಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕರಾದ ಅಭಯಚಂದ್ರ ಜೈನ್ ಮತ್ತು ಮೊಯ್ದಿನ್ ಬಾವಾರ ಮಧ್ಯೆ ಸಚಿವರ ಸಮ್ಮುಖವೇ ಮಾತಿನ ಚಕಮಕಿ ನಡೆದಿರುವುದು ಬಹಿರಂಗಗೊಂಡಿದೆ.

ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿಗೆ ಟಿಕೆಟ್ ‘ಕೈ’ ತಪ್ಪಿಸುವ ಪ್ರಯತ್ನವೂ ತೆರೆಮರೆಯಲ್ಲಿ ನಡೆಯುತ್ತಿದೆ. ಪುತ್ತೂರು ಬ್ಲಾಕ್ ಅಧ್ಯಕ್ಷ ಹೇಮನಾಥ ಶೆಟ್ಟಿ ತಾನೂ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಈಗಾಗಲೇ ವಿಧಾನಸಭಾ ಕ್ಷೇತ್ರ ಮತ್ತು ಬ್ಲಾಕ್ ಮಟ್ಟದಲ್ಲಿ ಪ್ರಚಾರ ಸಮಿತಿಯನ್ನು ನೇಮಿಸಿದೆ. ಅದಲ್ಲದೆ ಪಕ್ಷದ ಕಾರ್ಯಕರ್ತರಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ಕೊಡುಗೆಗಳನ್ನು ನೀಡತೊಡಗಿದೆ. ಕಾರ್ಯಕರ್ತರನ್ನು ತೃಪ್ತಿಪಡಿಸುವ ಸಲುವಾಗಿ ಹೊಸ ಹೊಸ ಹುದ್ದೆಗಳನ್ನು ಸೃಷ್ಟಿಸುತ್ತಿವೆ ಎಂಬ ಆರೋಪವೂ ರಾಜಕೀಯ ವಿಶ್ಲೇಷಕರಿಂದ ಕೇಳಿ ಬಂದಿದೆ.

ಬಿಜೆಪಿಯಲ್ಲಿ ಇನ್ನೂ ಟಿಕೆಟ್ ಅಂತಿಮಗೊಂಡಿಲ್ಲ. ಮಂಗಳೂರು, ಮಂಗಳೂರು ಉತ್ತರ ಮತ್ತು ದಕ್ಷಿಣ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಕ್ಷೇತ್ರದಿಂದ ಯಾರ್ಯಾರು ಸ್ಪರ್ಧಿಸುತ್ತಿದ್ದಾರೆ ಎಂಬುದು ಖಚಿತವಾಗಿಲ್ಲ. ಬಂಟ್ವಾಳದಲ್ಲಿ ರಾಜೇಶ್ ನಾಯ್ಕ ಉಳೆಪಾಡಿ ಗುತ್ತು ಮತ್ತು ಸುಳ್ಯದಲ್ಲಿ ಶಾಸಕ ಎಸ್. ಅಂಗಾರ ಕಣಕ್ಕಿಳಿಯುವುದು ಸ್ಪಷ್ಟ. ಅಭ್ಯರ್ಥಿ ಯಾರು ಎಂಬುದು ಖಚಿತಗೊಳ್ಳದ ಕ್ಷೇತ್ರದಲ್ಲಿ ಬಿಜೆಪಿಯ ಕಾರ್ಯಚಟುವಟಿಕೆ ಕೂಡ ಅಷ್ಟೇನೂ ಬಿರುಸು ಪಡೆದಿಲ್ಲ. ಆದರೆ, ಸೂಕ್ಷ್ಮ ವಿಚಾರಗಳಿಗೆ ತಟ್ಟನೆ ಸ್ಪಂದಿಸತೊಡಗಿವೆ.

ಜೆಡಿಎಸ್ ತನ್ನ ಅಸ್ತಿತ್ವಕ್ಕಾಗಿ ಮತ್ತೊಮ್ಮೆ ಪ್ರಯತ್ನ ನಡೆಸಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ಸುತ್ತಿನ ಪ್ರಚಾರ ಆರಂಭಿಸಿದ್ದಾರೆ. ವಿದ್ವಾಂಸರು, ವೈದ್ಯರು, ಇಂಜಿನಿಯರ್ ಮತ್ತಿತರರ ಜೊತೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಸಿಪಿಎಂ ಪಕ್ಷವು ಮಂಗಳೂರು, ಮಂಗಳೂರು ಉತ್ತರ, ದಕ್ಷಿಣ, ಮೂಡುಬಿದಿರೆ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಅಭ್ಯರ್ಥಿಗಳು ಈಗಾಗಲೆ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ-ಕಾಂಗ್ರೆಸ್ ವಿರುದ್ಧ ಆರೋಪದ ಸುರಿಮಳೆ ಹೊರಿಸುತ್ತಿದ್ದಾರೆ.

ಎಸ್‌ಡಿಪಿಐ ಕೂಡ ಇದಕ್ಕೆ ಹೊರತಾಗಿಲ್ಲ. ಮುಖ್ಯವಾಗಿ ಸಚಿವದ್ವಯರಾದ ರಮಾನಾಥ ರೈ ಮತ್ತು ಯು.ಟಿ.ಖಾದರ್ ವಿರುದ್ಧ ಟೀಕಾ ಪ್ರಹಾರ ಆರಂಭಿಸಿದೆ. ಎಸ್‌ಡಿಪಿಐ ರಾಜ್ಯ ನಾಯಕ ರಿಯಾಝ್ ಫರಂಗಿಪೇಟೆ ಅವರನ್ನು ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಎಂದು ಘೊಷಿಸಿದೆ. ಅಲ್ಲದೆ ಅವರ ಪರವಾಗಿ ಅಲ್ಲಲ್ಲಿ ಪ್ರಚಾರ ಸಭೆಗಳು ಆರಂಭಗೊಂಡಿದೆ. ಈ ನಡುವೆ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಬಂಟ್ವಾಳದಲ್ಲಿ ಮುಸ್ಲಿಂ ಅಭ್ಯರ್ಥಿಯ ಗೆಲುವಿಗಾಗಿ ರಮಾನಾಥ ರೈ ಯಾಕೆ ‘ಟಿಕೆಟ್’ ತ್ಯಾಗ ಮಾಡಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುವ ಮನೋಭಾವ ಕಂಡುಬರುತ್ತಿದೆ.

ಸಾಮಾಜಿಕ ಜಾಲ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಎಂ ಪಕ್ಷ ಮತ್ತು ಅದರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ವಿವಿಧ ಗ್ರೂಪ್‌ಗಳನ್ನು ರಚಿಸಿ ಪರ-ವಿರೋಧದ ಸಂದೇಶ ರವಾನಿಸತೊಡಗಿದ್ದಾರೆ. ಗ್ರಾಮ ಮಟ್ಟದಲ್ಲೂ ವಿವಿಧ ವಾಟ್ಸ್‌ಆ್ಯಪ್ ಗ್ರೂಪ್‌ಗಳು ರಚಿಸಲ್ಪಟ್ಟಿವೆ. ಗ್ರಾಮಗಳಲ್ಲಿರುವ ಸಮಸ್ಯೆಗಳು, ಅವುಗಳಿಗೆ ಪರಿಹಾರ ಏನು ಮತ್ತು ಹೇಗೆ? ಯಾಕೆ ಆಗಿಲ್ಲ, ಜನಪ್ರತಿನಿಧಿಗಳ ಪಾತ್ರವೇನು? ಇತ್ಯಾದಿ ಬಗ್ಗೆ ಆರೋಪ-ಪ್ರತ್ಯಾರೋಪ, ಚರ್ಚೆ-ವಾಗ್ವಾದ ಇತ್ಯಾದಿಯೂ ಎಗ್ಗಿಲ್ಲದೆ ನಡೆಯುತ್ತಿದೆ.

ಒಟ್ಟಿನಲ್ಲಿ ಚುನಾವಣೆಯ ದಿನಾಂಕ ಘೋಷಣೆಯಾಗದಿದ್ದರೂ ಕೂಡ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಎಂ, ಎಸ್‌ಡಿಪಿಐ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News