ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯ ಅಮಾನತಿಗೆ ಸಂಘಟನೆಗಳ ಆಗ್ರಹ

Update: 2018-03-19 11:17 GMT

ಮಂಗಳೂರು,ಮಾ.19: ಎಂಆರ್‌ಪಿಎಲ್ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಕಂಪೆನಿಗೆ 4ನೇ ಹಂತದ ವಿಸ್ತರಣೆಗೆ 811 ಎಕರೆ ಭೂಸ್ವಾಧೀನ ಮಾಡಲು ಕೆಐಎಡಿಬಿ ಅಕ್ರಮ ಮಾರ್ಗಗಳನ್ನು ಅನುಸರಿಸುತ್ತಿದೆ. ನಿಯಮಬಾಹಿರವಾಗಿ ದಾಖಲೆಗಳನ್ನು ತಿದ್ದಿದ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ದಾಸೇಗೌಡ ಅವರನ್ನು ವರ್ಗಾವಣೆ ಮಾಡಿದರೆ ಸಾಲದು, ಅವರನ್ನು ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸಬೇಕು. 2013ರ ಭೂ ಸ್ವಾಧೀನ ಕಾಯ್ದೆ ಅಡಿಯಲ್ಲೇ ಸ್ವಾಧೀನದ ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಕೃಷಿ ಭೂಮಿ ಸಂರಕ್ಷಣಾ ಸಮಿತಿ, ರೈತ ಸಂಘ, ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯು ಆಗ್ರಹಿಸಿದೆ.

ಸೋಮವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಲಾರೆನ್ಸ್ ಡಿಕುನ್ಹಾ ಕೆಐಎಡಿಬಿ ಅಧಿಕಾರಿ ಅಮಾಯಕ ರೈತರಿಗೆ ಗೊತ್ತಿಲ್ಲದಂತೆ ದಾಖಲೆಗಳನ್ನು ತಿರುಚಿ ಭೂಮಿ ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಅವರನ್ನು ಅಮಾನತು ಮಾಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಭೂಸ್ವಾಧೀನಕ್ಕೆ ಉದ್ದೇಶಿಸಿರುವ ಪೆರ್ಮುದೆ ಮತ್ತು ಕುತ್ತೆತ್ತೂರು ಗ್ರಾಮಗಳಲ್ಲಿನ ಶೇ.50ರಷ್ಟು ಭೂಮಾಲಕರು ತಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ನಮೂದಿಸಿದ ಜಾಗದಲ್ಲಿ ಅದನ್ನು ಅಳಿಸಿ ಅಕ್ರಮವಾಗಿ ‘ಭೂಮಿ ಕೊಡುತ್ತೇವೆ’ ಎಂದು ತಿದ್ದಲಾಗಿದೆ. ಈಗ ಗುರುತಿಸಲಾಗಿರುವ 811 ಎಕರೆಯಲ್ಲಿ ಶೇ.45ರಷ್ಟು ಜಮೀನನ್ನು ತರಿ ಮತ್ತು ಭಾಗಾಯ್ತು (ಕ್ರಮವಾಗಿ 3,2 ಬೆಳೆ ಬೆಳೆಯುವ ಜಮೀನು) ಎಂಬುದಾಗಿ ಸರಕಾರ ಹೊರಡಿಸಿರುವ ಭೂಸ್ವಾಧೀನ ಅಧಿಸೂಚನೆಯಲ್ಲೇ ನಮೂದಿಸಲಾಗಿದೆ. ಆದರೆ ಕೆಐಎಡಿಬಿ ಅಧಿಕಾರಿಯು ಎಲ್ಲ ಜಮೀನು ಒಣ ಮತ್ತು ಬರಡು ಭೂಮಿಯೆಂದು ದಾಖಲಿಸಿದ್ದಾರೆ. ಇಂತಹ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಲಾರೆನ್ಸ್ ಡಿಕುನ್ಹಾ ಆರೋಪಿಸಿದರು.

ಕೇಂದ್ರದಲ್ಲಿ ರೈತ ಪರ ಕಾಯ್ದೆಯನ್ನು 2013ರಲ್ಲಿ ಜಾರಿಗೊಳಿಸಲಾಗಿದೆ ಎಂದು ಹೇಳಿಕೊಳ್ಳುವ ರಾಜ್ಯ ಕಾಂಗ್ರೆಸ್ ಸರಕಾರ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಎಂಆರ್‌ಪಿಎಲ್ ಭೂಸ್ವಾಧೀನಕ್ಕೆ 2013ರ ಕಾಯ್ದೆ ಅನುಸರಿಸುವುದನ್ನು ಬಿಟ್ಟು ಹಳೆಯ ಕೆಐಎಡಿಬಿ 1966ರ ಕಾಯ್ದೆಯನ್ನು ಬಳಸುತ್ತಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ. 1966ರ ಕಾಯ್ದೆ ಬಳಕೆ ಅಸಿಂಧುವೆಂದು ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ. ಆದರೆ ರೈತ ಪರ ಸೋಗು ಹಾಕಿಕೊಳ್ಳುತ್ತಿರುವ ರಾಜ್ಯ ಸರಕಾರ ಅದನ್ನು ಅನುಷ್ಠಾನಗೊಳಿಸದೆ ನಿಜ ಬಣ್ಣ ಬಯಲುಗೊಳಿಸಿದೆ ಎಂದು ಲಾರೆನ್ಸ್ ಹೇಳಿದರು.

ಭೂ ಸ್ವಾಧೀನದ ಅತಿ ಪ್ರಮುಖ ಪ್ರಕ್ರಿಯೆಯಾದ 28(3) ವಿಚಾರಣೆ ಹಾಗೂ ಜಂಟಿ ಅಳತೆ (ಜೆಎಂಸಿ) ನಡೆದು ಹಲವು ತಿಂಗಳು ಕಳೆದರೂ ಮಾಹಿತಿ ಹಕ್ಕಿನ ಅನ್ವಯ ಈ ಮಾಹಿತಿಯನ್ನೇ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಮಾ.13ರಂದು ಪ್ರತಿಭಟನೆ ನಡೆಸಿದಾಗ ಈ ಮಾಹಿತಿಗಳು ದೊರೆತಿದೆ. ಆ ಮೂಲಕ ಕಂಪೆನಿ ಹಾಗೂ ಕೆಐಎಡಿಬಿಯು ದಾಖಲೆಗಳನ್ನು ಅಕ್ರಮವಾಗಿ ತಿದ್ದಿರುವುದು ಬೆಳಕಿಗೆ ಬಂದಿದೆ. ಈ ಪ್ರತಿಭಟನೆ ಸಂಪೂರ್ಣ ಅಹಿಂಸಾತ್ಮಕವಾಗಿ ನಡೆದಿದ್ದರೂ ಅದರಲ್ಲಿ ಪಾಲ್ಗೊಂಡ ರೈತರ ಮೇಲೆ ಕೆಐಎಡಿಬಿ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಕೋಆರ್ಡಿನೇಟರ್ ವಿದ್ಯಾ ದಿನಕರ್ ಮಾತನಾಡಿ, ಹೋರಾಟ ನಡೆಸಿ 2 ವರ್ಷಗಳೇ ಕಳೆದರೂ ಕಂಪೆನಿಯ ಭೂಸ್ವಾಧೀನ ನಕ್ಷೆಯನ್ನು ನೀಡಿರಲಿಲ್ಲ. ಇತ್ತೀಚೆಗಷ್ಟೆ ದೊರೆತಿದೆ. ಅದರಂತೆ ಈಗ ಕಂಪೆನಿ ಇರುವ ಜಾಗ ಮತ್ತು ಒತ್ತುವರಿ ಮಾಡಬೇಕಾದ ಜಾಗದ ನಡುವೆ ಅಲ್ಲಲ್ಲಿ ಸಣ್ಣ ಸಣ್ಣ ಜಮೀನು ಬಿಡಲಾಗಿದೆ. ಸುತ್ತ ಭೂಸ್ವಾಧೀನ ಮಾಡಿ ನಡುವಿನ ಕೆಲವು ರೈತರ ಜಮೀನು ಬಿಟ್ಟರೆ ಮುಂದೆ ಈ ರೈತರು ಅಲ್ಲಿ ಬದುಕುವುದಾದರೂ ಹೇಗೆ? ಸಂಪೂರ್ಣ ಅವೈಜ್ಞಾನಿಕವಾಗಿ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ದೂರಿದರು.

ಅತ್ಯಂತ ಅಪಾಯಕಾರಿಯಾದ ಪೆಟ್ರೋಕೆಮಿಕಲ್ ಉದ್ದಿಮೆಗಾಗಿ ಭೂಸ್ವಾಧೀನಪಡಿಸುತ್ತಿದ್ದರೂ ಲ್ಯಾಂಡ್ ಆಡಿಟ್ ಕಮಿಟಿಯಾಗಲೀ, 39ನೇ ರಾಜ್ಯಮಟ್ಟದ ಕ್ಲಿಯರೆನ್ಸ್ ಕಮಿಟಿಯವರಾಗಲೀ ಒಮ್ಮೆಯೂ ಸ್ಥಳ ತನಿಖೆ ನಡೆಸಿಲ್ಲ. ಕೇವಲ ಕಂಪೆನಿಯವರು ನೀಡಿದ ಪ್ರಸ್ತಾಪವನ್ನು ಒಪ್ಪಿಕೊಂಡಂತಿದೆ. ಕೆಐಎಡಿಬಿಯಲ್ಲೂ ಯೋಜನೆ ಬಗ್ಗೆ ಸಮಗ್ರ ವರದಿ ಲಭ್ಯವಿಲ್ಲ. ಸ್ಥಳಾಂತರ ಹೊಂದಬಹುದಾದ ಕುಟುಂಬಗಳ ನಿಖರ ಸಂಖ್ಯೆ, ಕುಟುಂಬಕ್ಕೆ ಒಂದರಂತೆ ಉದ್ಯೋಗ ನೀಡಬೇಕಾದ ಸಂಖ್ಯೆಯೂ ಲಭ್ಯವಿಲ್ಲ ಎಂದು ವಿದ್ಯಾ ದಿನಕರ್ ನುಡಿದರು.

ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿಕಿರಣ ಪುಣಚ ಮಾತನಾಡಿ, ಕೆಐಎಡಿಬಿ ಅಧಿಕಾರಿಗಳು ಸುಳ್ಳು ಸಹಿಗಳು, ಸುಳ್ಳು ವರದಿಗಳನ್ನು ಮಾಡಿಟ್ಟಿದ್ದಾರೆ. ಇವರ ದಾಖಲೆಗಳು ತಪ್ಪಾಗಿವೆ ಎಂದು ಸ್ವತಃ ಮಂಗಳೂರು ತಹಶೀಲ್ದಾರ್ ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಅವರ ವಿರುದ್ಧ ತನಿಖೆ ನಡೆಸಿಲ್ಲ. ಅಮಾನತು ಕೂಡ ಮಾಡಿಲ್ಲ. ಹಾಗಾಗಿ ಜಿಲ್ಲಾಡಳಿತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್, ಉಪಾಧ್ಯಕ್ಷೆ ಹೇಮಲತಾ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News