ಜುನೈದ್ ಹತ್ಯೆ ಪ್ರಕರಣ :ಕೇಂದ್ರದ ಪ್ರತಿಕ್ರಿಯೆ ಕೋರಿದ ಸುಪ್ರೀಂ

Update: 2018-03-19 14:09 GMT

ಹೊಸದಿಲ್ಲಿ, ಮಾ. 19: 2017ರಲ್ಲಿ ಬಲ್ಲಾಭ್‌ಗಢದಲ್ಲಿ ರೈಲಿನ ಒಳಗೆ 17 ವರ್ಷದ ಜುನೈದ್‌ರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ಕೋರಿ ಸಲ್ಲಿಸಿರುವ ಮನವಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಮುಂದಿನ ಆದೇಶದ ವರೆಗೆ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹಾಗೂ ಎಂ.ಎಂ. ಶಾಂತನಗೌಡರ್ ಅವರನ್ನು ಒಳಗೊಂಡ ಪೀಠ ತಡೆ ಹಿಡಿದಿದೆ.

 ಈ ಪ್ರಕರಣದ ಸಿಬಿಐ ತನಿಖೆ ನಿರಾಕರಿಸಿ 2017 ನವೆಂಬರ್ 27ರಂದು ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ ನೀಡಿದ್ದ ಆದೇಶವನ್ನು ಜುನೈದ್‌ನ ತಂದೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ ಹಾಗೂ ದ್ವೇಷದ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಜುನೈದ್‌ರನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಯಂತಹ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಆಗ್ರಹಿಸಿ 2017 ಅಕ್ಟೋಬರ್ 26ರಂದು ಜುನೈದ್‌ ತಂದೆ ಜಲಾಲುದ್ದೀನ್ ತಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿದ್ದರು.

ಜುನೈದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಫರಿದಾಬಾದ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ತಡೆಯುವಂತೆ ಕೂಡ ಅವರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News