ಓಲಾ, ಉಬರ್ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರದಿಂದ ಮಂಬೈ ನಿವಾಸಿಗಳು ಹೈರಾಣು

Update: 2018-03-19 14:13 GMT

 ಹೊಸದಿಲ್ಲಿ,ಮಾ.19: ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳಾದ ಓಲಾ ಮತ್ತು ಉಬರ್‌ಗಳ ಚಾಲಕರ ದೇಶವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಸೋಮವಾರ ಮುಂಬೈ ಮತ್ತು ದಿಲ್ಲಿಯ ಜನತೆ ಬವಣೆಗೊಳಗಾದರು. ಪ್ರೋತ್ಸಾಹ ಧನದಲ್ಲಿ ಕಡಿತ ಮತ್ತು ಉಭಯ ಕಂಪನಿಗಳಲ್ಲಿ ನೋಂದಾಯಿತ ಟ್ಯಾಕ್ಸಿಗಳ ಸಂಖ್ಯೆಯು ಹೆಚ್ಚುವುದ ರೊಂದಿಗೆ ಚಾಲಕರ ಲಾಭದಲ್ಲಿ ಕುಸಿತವುಂಟಾಗಿದ್ದು, ತಮಗೆ ಮಾಸಿಕ 1.25 ಲ.ರೂ.ಗಳ ವ್ಯವಹಾರ ನೀಡುವ ಭರವಸೆಯನ್ನು ಉಭಯ ಕಂಪನಿಗಳು ಈಡೇರಿಸಬೇಕೆಂಂದು ಚಾಲಕರು ಆಗ್ರಹಿಸಿದ್ದಾರೆ. ರಾಜ್ ಠಾಕ್ರೆಯವರ ಎಂಎನ್‌ಎಸ್‌ನ ಸಾರಿಗೆ ಯೂನಿಯನ್ ಈ ಮುಷ್ಕರದ ನೇತೃತ್ವ ವಹಿಸಿಕೊಂಡಿದೆ.

ಮುಷ್ಕರದ ಕೇಂದ್ರಬಿಂದುವಾಗಿರುವ ಮುಂಬೈನಲ್ಲಿ ರಸ್ತೆಯಲ್ಲಿ ಟ್ಯಾಕ್ಸಿಗಳ ಬರದಿಂದಾಗಿ ಪ್ರಯಾಣಿಕರು ಸುದೀರ್ಘ ಕಾಲ ಸರದಿಯಲ್ಲಿ ಕಾಯುವಂತಾಗಿತ್ತು, ಜೊತೆಗೆ ದುಬಾರಿ ಬಾಡಿಗೆಯನ್ನೂ ತೆರುವಂತಾ ಗಿತ್ತು. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ಪ್ರಯಾಣಿಸು ವವರು ಮುಷ್ಕರದ ಬಿಸಿಯನ್ನು ಕೊಂಚ ಹೆಚ್ಚೇ ಅನುಭವಿಸುವಂತಾಗಿತ್ತು.

ರವಿವಾರ ಮಧ್ಯರಾತ್ರಿಯಿಂದ ಆರಂಭಗೊಂಡಿರುವ ಮುಷ್ಕರವು ದಿಲ್ಲಿ, ಹೈದರಾಬಾದ್, ಪುಣೆ, ನಾಸಿಕ್ ಮತ್ತು ಔರಂಗಾಬಾದ್ ಸೇರಿದಂತೆ ಇತರ ನಗರಗಳಲ್ಲಿಯೂ ನಡೆಯುತ್ತಿದೆ.

ಓಲಾ ಮತ್ತು ಉಬರ್ ಕಂಪನಿಗಳು 5ರಿಂದ 7 ಲ.ರೂ.ಹೂಡಿಕೆ ಮಾಡಿರುವ ಈ ಚಾಲಕರಿಗೆ ಪ್ರತಿ ತಿಂಗಳು 1.25 ಲ.ರೂ.ಗೂ ಅಧಿಕ ಪ್ರತಿಫಲದ ಭರವಸೆಯನ್ನು ನೀಡಿದ್ದವು. ಆದರೆ ಅವರೀಗ ತಮಗೆ ಭರವಸೆ ನೀಡಿದ್ದ ಮೊತ್ತದ ಸ್ವಲ್ಪ ಭಾಗವನ್ನು ಮಾತ್ರ ಪಡೆಯುತ್ತಿದ್ದಾರೆ. ಚಾಲಕರು ಭಾರೀ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ, ಆದರೆ ಈ ಸಂಸ್ಥೆಗಳು ಕಂಪನಿ ಒಡೆತನದ ವಾಹನಗಳ ಚಾಲಕರ ಬಗ್ಗೆ ಮಾತ್ರ ಒಲವು ತೋರಿಸುತ್ತಿವೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಹಾರಾಷ್ಟ್ರ ನವನಿರ್ಮಾಣ ವಾಹತೂಕ ಸೇನಾದ ಅಧ್ಯಕ್ಷ ಸಂಜಯ ನಾಯ್ಕೆ ಅವರು ಆರೋಪಿಸಿದರು.

ಮುಂಬೈ ಮಹಾನಗರವೊಂದರಲ್ಲೇ ಆ್ಯಪ್ ಆಧಾರಿತ 45,000ಕ್ಕೂ ಅಧಿಕ ಟ್ಯಾಕ್ಸಿಗಳಿವೆಯಾದರೂ, ವ್ಯವಹಾರದಲ್ಲಿ ಕುಸಿತದಿಂದಾಗಿ ಅವುಗಳ ಸಂಖ್ಯೆ ಈಗ ಸುಮಾರು ಶೇ.20ರಷ್ಟು ಕಡಿಮೆಯಾಗಿದೆ.

ಚಾಲಕರ ಬೇಡಿಕೆಗಳಿಗೆ ಓಲಾ ಮತ್ತು ಉಬರ್ ಇನ್ನೂ ಪ್ರತಿಕ್ರಿಯಿಸಿಲ್ಲ. ಪ್ರಯಾಣಿಕರ ಸುರಕ್ಷತೆಗಾಗಿ ತಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಮುಂಬೈನ ಇತರ ಟ್ಯಾಕ್ಸಿ ಚಾಲಕರ ಒಕ್ಕೂಟಗಳೂ ಮುಷ್ಕರಕ್ಕೆ ಬೆಂಬಲವನ್ನು ಪ್ರಕಟಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News