ವಾಟ್ಸ್ಯಾಪ್ ಗಳನ್ನು ಗುರಿಯಾಗಿಸಿದ್ದಾರೆ ಚೀನಿ ಹ್ಯಾಕರ್ ಗಳು: ಭಾರತೀಯ ಸೇನೆಯ ಎಚ್ಚರಿಕೆ
ಬೆಂಗಳೂರು, ಮಾ.19: ಚೀನೀ ಹ್ಯಾಕರ್ ಗಳು ಭಾರತದ ವಾಟ್ಸ್ಸಾಪ್ ಬಳಕೆದಾರರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಭಾರತೀಯ ಸೇನೆಯು ವಿಡಿಯೋ ಮೂಲಕ ಎಚ್ಚರಿಸಿದೆ. ವಾಟ್ಸ್ಯಾಪನ್ನು ಬಳಕೆದಾರರು ಜಾಗರೂಕತೆಯಿಂದ ಬಳಸಬೇಕು ಎಂದು ಸೂಚಿಸಿದೆ.
ಭಾರತೀಯ ಸೇನೆಯ ಅಧಿಕೃತ ಹ್ಯಾಂಡಲೊಂದು ಈ ಬಗ್ಗೆ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದು, ಚೀನಿಯರು ಡಿಜಿಟಲ್ ಜಗತ್ತನ್ನು ಬೇಧಿಸುತ್ತಿದ್ದಾರೆ ಎಂದಿದೆ. “ನಿಮ್ಮ ಡಿಜಿಟಲ್ ಜಗತ್ತಿನ ಒಳಗೆ ಬರಲು ಚೀನಾ ಎಲ್ಲಾ ರೀತಿಯ ಪ್ಲಾಟ್ ಫಾರ್ಮನ್ನು ಬಳಸುತ್ತದೆ. ನಿಮ್ಮ ಸಿಸ್ಟಮನ್ನು ಹ್ಯಾಕ್ ಮಾಡಲು ವಾಟ್ಸ್ಯಾಪ್ ಗ್ರೂಪ್ ಗಳು ಹೊಸ ಮಾರ್ಗಗಳಾಗಿವೆ. +86 ಎಂದು ಆರಂಭವಾಗುವುದು ಚೀನಿ ನಂಬರ್ ಗಳಾಗಿವೆ. ಈ ಸಂಖ್ಯೆಗಳು ಗ್ರೂಪ್ ನಲ್ಲಿದ್ದುಕೊಂಡು ನಿಮ್ಮೆಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುತ್ತದೆ” ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ವಾಟ್ಸ್ಯಾಪ್ ಬಳಕೆದಾರರು ಜಾಗರೂಕರಾಗಿರಬೇಕು ಹಾಗು ನಿಮ್ಮ ಗ್ರೂಪ್ ಗಳಲ್ಲಿ +86ನಿಂದ ಆರಂಭವಾಗುವ ಸಂಖ್ಯೆಗಳಿವೆಯೇ ಎಂದು ಆಗಾಗ ಪರಿಶೀಲಿಸುತ್ತಿರಬೇಕು. ನೀವು ಸಿಮ್ ಬದಲಾಯಿಸಿದರೆ ಅದನ್ನು ತುಂಡರಿಸಿ ಎನ್ನಲಾಗಿದೆ.
ಚೀನಾದ ಹ್ಯಾಕರ್‌ಗಳಿಂದ ಸುಲಭವಾಗಿ ಹ್ಯಾಕ್ ಮಾಡಲಾಗುವ ಸುಮಾರು 40 ಆ್ಯಪ್‌ಗಳನ್ನು ಅಳಿಸಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಫಾರ್ಮ್ಯಾಟ್ ಮಾಡುವಂತೆ ಕಳೆದ ವರ್ಷ ಭಾರತೀಯ ಸೇನೆ ಗಡಿಯಲ್ಲಿರುವ ತನ್ನ ಸೈನಿಕರಿಗೆ ಸೂಚಿಸಿತ್ತು. ಚೀನಾ ನಿರ್ಮಿಸಿರುವ ಅಥವಾ ಚೀನಾ ಜೊತೆ ಸಂಬಂಧ ಹೊಂದಿರುವ ಆ್ಯಪ್‌ಗಳು ಗುಪ್ತಕಣ್ಗಾವಲು ಸಾಧನಗಳಾಗಿರುವ ಸಾಧ್ಯತೆಗಳಿದ್ದು ಇವುಗಳಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಸೇನೆ ತಿಳಿಸಿದೆ.