×
Ad

ನ್ಯಾಶನಲ್ ಹೆರಾಲ್ಡ್ ಪ್ರಕರಣ : 10 ಕೋ. ರೂ. ಠೇವಣಿ ಇರಿಸಲು ಯಂಗ್ ಇಂಡಿಯಾಗೆ ಆದೇಶ

Update: 2018-03-19 20:16 IST

ಹೊಸದಿಲ್ಲಿ, ಮಾ. 19: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಪ್ರಮುಖ ಶೇರುದಾರರಾಗಿರುವ ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 249.15 ಕೋ. ರೂ. ಆದಾಯ ತೆರಿಗೆ ಬಾಕಿಯಲ್ಲಿ 10 ಕೋ. ರೂ. ಠೇವಣಿ ಇರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ನಿರ್ದೇಶಿಸಿದೆ.

ನಾಲ್ಕು ವಾರಗಳಲ್ಲಿ ಎರಡು ಕಂತಿನಲ್ಲಿ ಹಣ ಠೇವಣಿ ಇರಿಸಲು ನ್ಯಾಯಾಲಯ ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಅವಕಾಶ ನೀಡಿದೆ ಹಾಗೂ ಅದುವರೆಗೆ ಆದಾಯ ತೆರಿಗೆ ಇಲಾಖೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕ್ರಮ ಕೈಗೊಳ್ಳದಂತೆ ನಿರ್ಬಂಧಿಸಿದೆ. ವೈಐಪಿಎಲ್ ವಿರುದ್ಧದ ಆದಾಯ ತೆರಿಗೆ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಯುಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ.

 ನ್ಯಾಶನಲ್ ಹೆರಾಲ್ಡ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯ ಈ ಹಿಂದೆ ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. 20 ಲಕ್ಷ ರೂ. ಬಂಡಾವಾಳದೊಂದಿಗೆ 2010ರಲ್ಲಿ ಆರಂಭವಾದ ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆಯ ಮಾಲಕರ ಅಸೋಷಿಯೇಟ್ ಜರ್ನಲ್ ಲಿಮಿಟೆಡ್‌ನ ಎಲ್ಲ ಶೇರುಗಳನ್ನು ಹೊಂದಿತ್ತು.

  ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಹಾಗೂ ಎ.ಕೆ. ಚಾವ್ಲಾ ಅವರನ್ನೊಳಗೊಂಡ ಪೀಠ, ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಮನವಿಯನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸುವ ಮೊದಲು 249.15 ಕೋ. ರೂ. ತೆರಿಗೆಯ ಒಂದು ಭಾಗ ಠೇವಣಿ ಇರಿಸಬೇಕು ಎಂದು ಹೇಳಿದೆ. ಎಷ್ಟು ಮೊತ್ತವನ್ನು ಠೇವಣಿ ಇರಿಸಲು ಸಾಧ್ಯವಾಗುತ್ತದೆ ಎಂಬುದನ್ನು ಮಾರ್ಚ್ 19ರ ಒಳಗೆ ಮಾಹಿತಿ ನೀಡುವಂತೆ ಕೂಡ ನ್ಯಾಯಾಲಯ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News