ಬಾಯಾರಿರುವ ಉಡುಪಿಗೆ ವಾರಾಹಿಯಿಂದ ‘ಪವರ್ ಶಾಕ್’
ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ಬೇಸಿಗೆಯ ಹೊತ್ತಿಗೆ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಉಡುಪಿ ನಗರಕ್ಕೆ ನೀರುಣಿಸುವ ಸ್ವರ್ಣೆಯ ಒಡಲಲ್ಲಿರುವ ನೀರು, ಬೆಳೆಯುತ್ತಿರುವ ಜಿಲ್ಲಾಕೇಂದ್ರ ಉಡುಪಿಯ ಗಾತ್ರಕ್ಕೆ ಏನೇನೂ ಸಾಲದು. ಉಡುಪಿಗೆ ಕಡಿಮೆ ಬಿದ್ದಿರುವ ನೀರನ್ನು ಆಸುಪಾಸಿನಲ್ಲೇ ಇರುವ ಸೀತಾ ಅಥವಾ ಮಡಿಸಾಲು ನದಿಗಳ ಬದಲು ದೂರದ ವಾರಾಹಿಯಿಂದಲೇ ತರಬೇಕೆಂಬ ಹಠದ ಹಿಂದಿರುವ ವಾಸ್ತವಗಳು ಯಾರನ್ನೂ ಬೆಚ್ಚಿಬೀಳಿಸಬಲ್ಲವು. ಖಾಸಗಿ ಜಲ ವಿದ್ಯುತ್ ಉತ್ಪಾದಕ ಲಾಬಿಗೆ ವರ್ಷಪೂರ್ತಿ ವಿದ್ಯುತ್ ಉತ್ಪಾದನೆ ಮಾಡಿ ಲಾಭ ಗಳಿಸಿಕೊಳ್ಳಲು ಸರಕಾರದ ವತಿಯಿಂದ ಅಂದಾಜು 122.50 ಕೋಟಿ ರೂಪಾಯಿ ಸಾರ್ವಜನಿಕ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಯೋಜನೆ ಇದಾಗಿದೆ ಎನ್ನುವುದು ಜನಸಾಮಾನ್ಯರ ಆರೋಪ, ಮೊನ್ನೆ ಜನವರಿ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ. ಒಟ್ಟು 300.27 ಕೋಟಿ ರೂ. ವೆಚ್ಚದ ಈ ಮೂರು ಹಂತಗಳ ಯೋಜನೆಯ ಕಾಮಗಾರಿಗಳು ಈಗ ಟೆಂಡರಿನ ವಿವಿಧ ಹಂತಗಳಲ್ಲಿವೆ.
ಕೇಂದ್ರ ಸರಕಾರದ ನಗರಗಳ ಪುನರುಜ್ಜೀವನ ಮತ್ತು ಪರಿವರ್ತನೆಗೆ ಅಟಲ್ ಮಿಷನ್ ಯೋಜನೆಯಡಿ, ಏಶ್ಯನ್ ಡೆವಲಪ್ ಮೆಂಟ್ ಬ್ಯಾಂಕಿನ ನೆರವಿನೊಂದಿಗೆ ನಡೆದಿರುವ ಈ ಕಾಮಗಾರಿಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿರ್ವಹಿಸುತ್ತಿದೆ. ಹಾಲಿ ನೀರಿನ ವ್ಯವಸ್ಥೆ: ಸ್ವರ್ಣಾ ನದಿಯಿಂದ ಎರಡು ಹಂತಗಳಲ್ಲಿ ಉಡುಪಿಗೆ ನೀರು ಸರಬರಾಜಾಗುತ್ತಿದೆ. 1971ರಲ್ಲಿ ಮೊದಲ ಹಂತದಲ್ಲಿ ಪ್ರತಿದಿನ 9.00 ದಶಲಕ್ಷ ಲೀಟರ್ ನೀರು ಸರಬರಾಜು ಯೋಜನೆ ಆಗಿ ದ್ದರೆ, ಮುಂದೆ 2006ರಲ್ಲಿ ಆರಂಭ ಗೊಂಡ ಸ್ವರ್ಣಾ ಎರಡನೇ ಹಂತದ ಯೋಜನೆಯಲ್ಲಿ ಉಡುಪಿಗೆ ಪ್ರತಿದಿನ 27.24 ದಶಲಕ್ಷ ಲೀಟರ್ ನೀರು ಸರ ಬರಾಜು ಆಗಬೇಕಿದೆ. ಆದರೆ ಸುಡು ಬೇಸಿಗೆಯ (ಫೆಬ್ರವರಿ - ಮೇ ನಡು ವಿನ) ಅಂದಾಜು 101ದಿನಗಳಲ್ಲಿ ಸ್ವರ್ಣಾ ನದಿಯಲ್ಲಿ ನೀರಿನ ಹರಿವು ಏನೇನೂ ಇರುವುದಿಲ್ಲ ಎಂದು ದಾಖಲೆಗಳು ಹೇಳುತ್ತಿವೆ.
ಹಾಲಿ ಇರುವ ಎರಡು ಹಂತದ ಯೋಜನೆಗಳಲ್ಲಿ ಉಡುಪಿಯಿಂದ 15 ಕಿ.ಮೀ. ದೂರದ ಬಜೆಯಲ್ಲಿ ಹಾಗೂ ಅಲ್ಲಿಂದ 7.1ಕಿ.ಮೀ. ದೂರದ ಶೀರೂರು ಮಠದ ಬಳಿ (ಉಡುಪಿಗೆ 25 ಕಿ.ಮೀ. ದೂರ) ಸ್ವರ್ಣಾ ನದಿಗೆ ಒಡ್ಡು ಕಟ್ಟಿ (ವೆಂಟೆಡ್ ಡ್ಯಾಮ್) ನೀರನ್ನು ಹಿಡಿದಿಡಲಾಗುತ್ತಿದೆ. ಬಜೆ ಬಳಿ ಜಾಕ್ ವೆಲ್ ಮೂಲಕ ನದಿಯ ನೀರನ್ನು ಹಿಡಿದು ಮಣಿಪಾಲದ ಬಳಿ ಶುದ್ಧೀಕರಿಸಿ ನಗರಕ್ಕೆ ವಿತರಿಸಲಾಗುತ್ತಿದೆ. ಉಡುಪಿಯಲ್ಲಿ ಹಾಲೀ ಜನಸಂಖ್ಯೆ 1.36ಲಕ್ಷ ಇದ್ದು, ಅದು 2046ರ ಹೊತ್ತಿಗೆ 1.94ಲಕ್ಷಕ್ಕೆ ಏರುವ ನಿರೀಕ್ಷೆ ಇದೆ. (ವಿವರಗಳಿಗೆ ಬಾಕ್ಸ್ ನೋಡಿ) ಈ ವಾ ಸ್ತವಗಳನ್ನು ಗಮನದಲ್ಲಿರಿಸಿಕೊಂಡು ವಾರಾಹಿ ನದಿಯಿಂದ ನೀರನ್ನು ತರಲಾಗುವುದು ಎಂದು ಹಾಲೀ ಯೋಜನಾವರದಿ ವಿವರಿಸುತ್ತದೆ.
ವಾಸ್ತವ ಏನು?
ಉಡುಪಿಗೆ ಹತ್ತಿರದಲ್ಲೇ ಇರುವ ಸೀತಾ ಅಥವಾ ಮಡಿಸಾಲು ನದಿಗಳಿಂದ ನೀರು ತರುವ ಬದಲು 38.5 ಕಿಮೀ. ದೂರದಲ್ಲಿರುವ ವಾರಾಹಿ ನದಿಯಿಂದ ನೀರು ತರುತ್ತಿರುವ ಉದ್ದೇಶ ಏನೆಂಬುದು ಹಲವು ಅನುಮಾನಗಳನ್ನು ಹುಟ್ಟಿಸಿದೆ.
ಸ್ವರ್ಣಾ ನದಿಯಲ್ಲಿ 96.11 Tmc ಸೀತಾ ನದಿಯಲ್ಲಿ 103. 94 Tmc ಮತ್ತು ಮಡಿಸಾಲು ನದಿಯಲ್ಲಿ 34.42 Tmc ನೀರು ಲಭ್ಯವಿದೆ. ಇವುಗಳಲ್ಲಿ ಸ್ವರ್ಣಾ ಹೊರತುಪಡಿಸಿದರೆ, ಉಳಿದೆರಡು ನದಿಗಳಲ್ಲಿನ ನೀರನ್ನು ಈ ತನಕ ಈ ರೀತಿಯ ಯೋಜನೆಗಳಿಗೆ ಬಳಕೆ ಮಾಡಲಾಗಿಲ್ಲ. ಹತ್ತಿರದಲ್ಲೇ ಇರುವ ಆ ನದಿಗಳನ್ನು ಬಿಟ್ಟು ಈಗಾಗಲೇ ಸಾಕಷ್ಟು ಒತ್ತಡಗಳನ್ನು ಹೊಂದಿರುವ ದೂರದ ವಾರಾಹಿಯತ್ತ ಕಣ್ಣು ಹಾಕಲಾಗಿದೆ.
1979ರಲ್ಲಿ ಗುಂಡೂರಾವ್ ಸರಕಾರ ನೀರಾವರಿ ಯೋಜನೆಗೆಂದು ವಾರಾಹಿ ನದಿಯತ್ತ ಕಣ್ಣು ಹಾಕಿದ ದಿನದಿಂದಲೇ ವಾರಾಹಿ ನದಿ ಮತ್ತು ಅದರ ಅಚ್ಚುಕಟ್ಟು ಪ್ರದೇಶದ ರೈತಸಮುದಾಯ ಶಾಪಗ್ರಸ್ತಗೊಂಡಿದೆ. ವಾರಾಹಿ ನದಿಯಲ್ಲಿ 119.79 Tmc ನೀರಿನ ಲಭ್ಯತೆ ಇದೆಯಾದರೂ, ಅದನ್ನು ನೀರಾವರಿಗೆ ಬಳಸಲು ಸ್ಥಳೀಯರು ಸುದೀರ್ಘ ಹೋರಾಟವನ್ನೇ ನಡೆಸಬೇಕಾಯಿತು. ಖಾಸಗಿ ವಿದ್ಯುತ್ ಉತ್ಪಾದಕರ, ಗುತ್ತಿಗೆದಾರರ ಲಾಬಿಯಿಂದ ಎದುರಾದ ನೂರಾರು ಅಡೆತಡೆಗಳನ್ನು ನಿವಾರಿಸಿಕೊಂಡು ಮೂವತ್ತ್ತು ವರ್ಷಗಳ ಬಳಿಕ ರೈತರಿಗೆ ನೀರು ಇನ್ನೇನು ದೊರಕಿತೆನ್ನುವಾಗಲೇ, ಖಾಸಗಿ ವಿದ್ಯುತ್ ಉತ್ಪಾದಕರ ‘ಲಾಬಿ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಿಂದ’ ಎಂಬಂತೆ ಬಹಳ ಚಾಣಾಕ್ಷತೆಯಿಂದ ಹೊಸ ರೂಪದಲ್ಲಿ ವಕ್ಕರಿಸಿಕೊಂಡಿದೆ.
(ಮುಂದುವರಿಯುವುದು)