ವಿದರ್ಭ ಮಡಿಲಿಗೆ ಇರಾನಿ ಟ್ರೋಫಿ
ನಾಗ್ಪುರ, ಮಾ.19: ರಣಜಿ ಟ್ರೋಫಿ ಚಾಂಪಿಯನ್ ವಿದರ್ಭ ತಂಡ ಮೊದಲ ಬಾರಿ ಇರಾನಿ ಟ್ರೋಫಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ರವಿವಾರ ಮುಕ್ತಾಯಗೊಂಡ ಇರಾನಿ ಟ್ರೋಫಿ ಫೈನಲ್‌ನಲ್ಲಿ ವಿದರ್ಭ ತಂಡ ಮೊದಲ ಇನಿಂಗ್ಸ್‌ನಲ್ಲಿ ಶೇಷ ಭಾರತ ತಂಡದ ವಿರುದ್ಧ ದೊಡ್ಡ ಮೊತ್ತದ ಸವಾಲು ದಾಖಲಿಸಿದ ಹಿನ್ನಲೆಯಲ್ಲಿ ಇರಾನಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ದೇಶಿಯ ಕ್ರಿಕೆಟ್‌ನಲ್ಲಿ ಸತತ ಎರಡನೇ ಪ್ರಶಸ್ತಿಯನ್ನು ವಿದರ್ಭ ಪಡೆದಿದೆ.
ವಿದರ್ಭ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟದಲ್ಲಿ 800 ರನ್ ದಾಖಲಿಸಿ ಪಂದ್ಯದ ನಾಲ್ಕನೇ ದಿನವಾಗಿರುವ ಶನಿವಾರ ಡಿಕ್ಲೇರ್ ಮಾಡಿಕೊಂಡಿತ್ತು. ವಸೀಮ್ ಜಾಫರ್ (286), ಅಪೂರ್ವ ವಾಂಖೆಡೆ (ಔಟಾಗದೆ 157) ಮತ್ತು ಗಣೇಶ್ ಸತೀಶ್ ( 120) ನೆರವಿನಲ್ಲಿ ವಿದರ್ಭ ತಂಡವು ಎದುರಾಳಿ ಶೇಷ ಭಾರತ ತಂಡಕ್ಕೆ ಕಠಿಣ ಸವಾಲು ವಿಧಿಸಿತ್ತು.
ಶನಿವಾರ ಶೇಷ ಭಾರತ ತಂಡ ರಜನೀಶ್ ಗುರ್ಬಾನಿ (46ಕ್ಕೆ 4) ದಾಳಿಗೆ ಸಿಲುಕಿ ಮೊದಲ ಇನಿಂಗ್ಸ್‌ನಲ್ಲಿ 236 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. 98ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಶೇಷ ಭಾರತ ತಂಡವನ್ನು ಹನುಮ ವಿಹಾರಿ (183) ಮತ್ತು ಜಯಂತ್ ಯಾದವ್(96) ಅವರು ಹೋರಾಟದ ಮೂಲಕ ಕಡಿಮೆ ಮೊತ್ತಕ್ಕೆ ಆಲೌಟಾಗುವ ಭೀತಿಯಿಂದ ತಂಡವನ್ನು ಪಾರು ಮಾಡಿದ್ದರು. ವಿಹಾರಿ 14ನೇ ಪ್ರಥಮ ದರ್ಜೆ ಶತಕ ದಾಖಲಿಸಿದ್ದರು. ಅಂತಿಮ ದಿನ ಶೇಷ ಭಾರತ 390ಕ್ಕೆ ಮೊದಲ ಇನಿಂಗ್ಸ್ ನಲ್ಲಿ ಆಲೌಟಾಗಿತ್ತು. ಇದರೊಂದಿಗೆೆ 410 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದ ವಿದರ್ಭ ಎರಡನೇ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿತ್ತು. ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ ವಿದರ್ಭ ಪ್ರಶಸ್ತಿಯನ್ನು ತನ್ನದಾಗಿಸಿದೆ. ಈ ಪಂದ್ಯದಲ್ಲಿ ವಿದರ್ಭ ತಂಡದ ವಸೀಂ ಜಾಫರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18 ಸಾವಿರ ರನ್ ಮತ್ತು 8ನೇ ದ್ವಿಶತಕ ಗಳಿಸಿದ್ದರು.
ಸಂಕ್ಷಿಪ್ತ ಸ್ಕೋರ್ ವಿವರ
►ವಿದರ್ಭ ತಂಡ ಮೊದಲ ಇನಿಂಗ್ಸ್‌ನಲ್ಲಿ ಡಿಕ್ಲೇರ್ 800/7( ಜಾಫರ್ 286, ವಾಂಖೆಡೆ ಔಟಾಗದೆ 157, ಗಣೇಶ್ ಸತೀಶ್ 120; ಸಿದ್ದಾರ್ಥ ಕೌಲ್ 91ಕ್ಕೆ 2)
►ಶೇಷ ಭಾರತ ಮೊದಲ ಇನಿಂಗ್ಸ್ 390( ವಿಹಾರಿ 183, ಯಾದವ್ 96; ಗುರ್ಬಾನಿ 46ಕ್ಕೆ 4, ಆದಿತ್ಯ 97ಕ್ಕೆ 3)
►ವಿದರ್ಭ ಎರಡನೇ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 79( ಅಕ್ಷಯ್ ವಾಡ್ಕರ್ ಔಟಾಗದೆ 50, ಆರ್ ಸಂಜಯ್ ಔಟಾಗದೆ 27).