ಸುರತ್ಕಲ್‌ನಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬಿಜೆಪಿ ಆಕ್ಷೇಪ

Update: 2018-03-20 05:58 GMT

ಮಂಗಳೂರು, ಮಾ.20: ಇಂದು ಅವಿಭಜಿತ ದ.ಕ. ಜಿಲ್ಲೆಗೆ ಆಗಮಿಸಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ 'ಜನಾಶೀರ್ವಾದ ಯಾತ್ರೆ'ಯ ವೇಳೆ ಸುರತ್ಕಲ್‌ನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಬಿಜೆಪಿ ಹಾಗೂ ಹಿಂಜಾವೇ ಮುಖಂಡ ಸತ್ಯಜಿತ್ ಅವರು ಮಂಗಳೂರು ಡಿಸಿಪಿಯೊಂದಿಗೆ ಮಾತನಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಹುಲ್ ಗಾಂಧಿಯವರು ಇಂದು ಸಂಜೆ ಸುರತ್ಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವರು. ಇದಕ್ಕಾಗಿ ಸುರತ್ಕಲ್ ಜಂಕ್ಷನ್‌ನಲ್ಲಿ ರಸ್ತೆ ಬದಿಯಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಇದನ್ನು ವಿರೋಧಿಸಿರುವ ಬಿಜೆಪಿ ಮುಖಂಡ ಸತ್ಯಜಿತ್ ಅವರು ಮಂಗಳೂರು ಡಿಸಿಪಿಗೆ ಮೊಬೈಲ್ ಫೋನ್ ಕರೆ ಮಾಡಿ ಆಕ್ಷೇಪಿಸುತ್ತಿರುವ ವೀಡಿಯೋ ವೈರಲ್ ಆಗಿದೆ.

ನಿನ್ನೆ ರಾತ್ರಿ ಸುರತ್ಕಲ್‌ನಲ್ಲಿ ತನ್ನ ಬೆಂಬಲಿಗರೊಂದಿಗೆ ನಿಂತುಕೊಂಡು ಡಿಸಿಪಿ ಅವರನ್ನು ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿದ ಸತ್ಯಜಿತ್, ಇದುವರೆಗೆ ಸುರತ್ಕಲ್ ಜಂಕ್ಷನ್‌ನಲ್ಲಿ ವೇದಿಕೆ ನಿರ್ಮಿಸಿ ರಾಜಕೀಯ ಕಾರ್ಯಕ್ರಮವನ್ನು ಯಾರು ಮಾಡಿಲ್ಲ. ಬಿಜೆಪಿಗೂ ಇದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಕಾಂಗ್ರೆಸ್‌ಗೆ ಅವಕಾಶ ನೀಡಿದರೆ, ಮುಂದೆ ನಮಗೂ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಅವಕಾಶ ನೀಡಿದರೆ ಬಿಜೆಪಿಯ ಚುನಾವಣಾ ಪ್ರಚಾರವನ್ನು ಸುರತ್ಕಲ್ ಜಂಕ್ಷನ್‌ನಲ್ಲೇ ಹಮ್ಮಿಕೊಳ್ಳುತ್ತೇವೆ. ದೇವರ ವಿಗ್ರಹವನ್ನೂ ತಂದು ಕುಳ್ಳಿರಿಸುತ್ತೇವೆ. ಈ ಬಗ್ಗೆ ಯಾವುದೇ ಚರ್ಚೆಗೆ ನಾವು ಸಿದ್ಧರಿಲ್ಲ. ಮುಂದಾಗುವ ಯಾವುದೇ ಬೆಳವಣಿಗೆಗೆ ನೀವೇ ಕಾರಣರಾಗುತ್ತೀರಿ ಎಂದು ಸತ್ಯಜಿತ್ ಡಿಸಿಪಿಯವರಿಗೆ ಬೆದರಿಕೆ ಹಾಕುತ್ತಿರುವ ದೃಶ್ಯಾವಳಿ ವೈರಲ್ ವೀಡಿಯೊದಲ್ಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News