ನಾರಾಯಣಗುರು, ಬಸವಣ್ಣರ ಮಾತುಗಳನ್ನು ಉಲ್ಲೇಖಿಸಿದರೆ ಸಾಲದು ನುಡಿದಂತೆ ನಡೆದು ತೋರಿಸಿ; ಮೋದಿಗೆ ರಾಹುಲ್ ಸವಾಲು

Update: 2018-03-20 15:52 GMT

ಉಡುಪಿ, ಮಾ.20:ಕರ್ನಾಟಕದ 'ಮಹಾತ್ಮ'ರಾದ ನಾರಾಯಣಗುರು ಹಾಗೂ ಬಸವಣ್ಣರ ಮಾತುಗಳನ್ನು ತಮ್ಮ ಭಾಷಣಗಳಲ್ಲಿ ಉಲ್ಲೇಖಿಸಿದರೆ ಸಾಲದು, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಮಾಡಿರುವಂತೆ 'ನುಡಿದಂತೆ ನಡೆದು' ತೋರಿಸಿ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವಸಿದ್ಧತೆಯಾಗಿ ರಾಜ್ಯದಲ್ಲಿ ಮೂರನೇ ಹಂತದ ಜನಾರ್ಶೀವಾದ ಯಾತ್ರೆಯನ್ನು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಲ್ಲಿ ಪ್ರಾರಂಭಿಸಿದ ರಾಹುಲ್ ಗಾಂಧಿ ಮಂಗಳವಾರ ಅಪರಾಹ್ನ ಪಡುಬಿದ್ರಿ ಪೇಟೆಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದರು.

ತಮ್ಮ ಭಾಷಣದ ಆರಂಭದಿಂದ ಹಲವು ಬಾರಿ ನಾಡಿನ ನಾರಾಯಣಗುರು ಹಾಗೂ ಬಸವಣ್ಣರ ತತ್ವಸಿದ್ಧಾಂತಗಳನ್ನು ಉದ್ಘರಿಸಿದ ರಾಹುಲ್‌ಗಾಂಧಿ, ರಾಜ್ಯದ ಕಾಂಗ್ರೆಸ್ ಸರಕಾರ ಹಾಗೂ ಕೇಂದ್ರದ ಬಿಜೆಪಿಯ ಕಾರ್ಯವೈಖರಿಯನ್ನು ತುಲನೆ ಮಾಡುತ್ತಾ ಪ್ರಧಾನಮಂತ್ರಿಗಳಿಗೆ ಸವಾಲನ್ನು ಎಸೆದು ನೆರೆದ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಪ್ರಯತ್ನ ನಡೆಸಿದರು.

ರಾಹುಲ್‌ಗಾಂಧಿ ಅವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಬಿ.ಕೆ.ಹರಿಪ್ರಸಾದ್ ಕನ್ನಡಕ್ಕೆ ತುರ್ಜಮೆ ಮಾಡಿದರು. ನಾರಾಯಣಗುರುಗಳ ಕರ್ಮಭೂಮಿ ಇದಾಗಿದೆ.ಗುರುಗಳು ಎಲ್ಲರೂ ಸಮಾನರು. ಎಲ್ಲರಲ್ಲಿಯೂ ಇರುವ ಭಗವಂತನು ಒಬ್ಬನೇ ಎಂದಿದ್ದಾರೆ. ನಾವೆಲ್ಲರೂ ಒಂದೇ ಎಂಬುದು ನಾರಾಯಣಗುರುಗಳ ಮೂಲಮಂತ್ರ ಎಂದು ರಾಹುಲ್ ನುಡಿದರು.

ಇದೇ ರೀತಿ ಬಸವಣ್ಣರು 'ನುಡಿದಂತೆ ನಡೆ' ಎಂದು ಹೇಳಿದ್ದಾರೆ. ಆಡಿದ್ದನ್ನು ಮಾಡಿ ತೋರಿಸು ಎಂಬುದು ಇದರ ಅರ್ಥ. ಇವರಿಬ್ಬರು ಮಹಾಪುರುಷರು ನಾಡಿಗೆ, ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ದಾರಿದೀಪದಂತಿದ್ದಾರೆ. ಬಸವಣ್ಣರ ಕಾಲದಲ್ಲೇ ಕರ್ನಾಟಕದಲ್ಲಿ ಲೋಕತಂತ್ರ, ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿತ್ತು ಎಂದರು.

ಪ್ರಧಾನಿ ಮೋದಿ ಅವರು ನಾರಾಯಣಗುರು ಹಾಗೂ ಬಸವಣ್ಣರ ಮಾತುಗಳನ್ನು ಅಲ್ಲಲ್ಲಿ ಉಲ್ಲೇಖಿಸುತ್ತಾರೆ. ಆದರೆ ಅವರ ಪಕ್ಷದವರು ಒಬ್ಬನನ್ನು ಇನ್ನೊಬ್ಬನ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತಿದ್ದಾರೆ. ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ಕಲಹವನ್ನು ಹುಟ್ಟುಹಾಕುತ್ತಾರೆ.ಮಹಾತ್ಮರ ಮಾತುಗಳನ್ನು ಉದ್ಘರಿಸುತ್ತಾ ಮೋದಿ, ಹೇಳಿದ್ದಕ್ಕೆ ವಿರುದ್ಧವಾದ ಕೆಲಸ ಮಾಡುತ್ತಾರೆ ಎಂದು ರಾಹುಲ್ ಆರೋಪಿಸಿದರು.

ಬ್ಯಾಂಕ್ ಲೂಟಿ:ಕರಾವಳಿ ಜಿಲ್ಲೆಯಲ್ಲಿ ಹುಟ್ಟಿದ ನಾಲ್ಕು ಬ್ಯಾಂಕುಗಳು ಸೇರಿದಂತೆ, ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಜನರ ಮನೆ ಬಾಗಿಲಿಗೆ ತಂದಿತು. ಹಳ್ಳಿಹಳ್ಳಿಗಳಲ್ಲಿ ಬ್ಯಾಂಕ್ ಶಾಖೆಗಳು ತೆರೆದವು. ಬಡವರು, ಹಿಂದುಳಿದವರು, ಮಹಿಳೆಯರಿಗೆ ಬ್ಯಾಂಕ್ ಬಾಗಿಲು ತೆರೆದವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಹತ್ತಾರು ಮಂದಿ ಶ್ರೀಮಂತರು, ಬಂಡವಾಳಶಾಹಿಗಳು ಬ್ಯಾಂಕುಗಳನ್ನು ಲೂಟಿ ಮಾಡಿ ವಿದೇಶಕ್ಕೆ ಪಲಾಯನ ಮಾಡುತಿದ್ದಾರೆ ಎಂದರು.

ಕಳೆದ ವರ್ಷ ಬಿಜೆಪಿ ಸರಕಾರ ದೇಶದ ಶ್ರೀಮಂತರ 2.5ಕೋಟಿರೂ. ಸಾಲವನ್ನು ಮನ್ನಾ ಮಾಡಿತು. ಆದರೆ ದೇಶದ ಸಾವಿರಾರು ಮಂದಿ ರೈತರು ಸಾಲ ಮನ್ನಾ ಮಾಡಿ ಎಂದು ಕೇಳಿದರೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಮೋದಿ, ಅದು ನಮ್ಮ ನೀತಿಯಲ್ಲ ಎನ್ನುತ್ತಾರೆ. ಇದೇ ವೇಳೆ ಸಿದ್ದರಾಮಯ್ಯ ಅವರು ರಾಜ್ಯ ರೈತರ 8000 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯ, ರೈತರ ಸಾಲ ಮನ್ನಾ ಮುಂತಾದ ಜನಪರ ಯೋಜನೆಗಳನ್ನು, ಕೇಂದ್ರದ ಮೋದಿ ಸರಕಾರದ ಧೋರಣೆಗಳೊಂದಿಗೆ ಹೋಲಿಸಿ, ಬಿಜೆಪಿ ಸರಕಾರವನ್ನು ಕಟುವಾಗಿ ಟೀಕಿಸಿದ ರಾಹುಲ್ ಗಾಂದಿ, ಮೋದಿ ಹೋದಲ್ಲೆಲ್ಲಾ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಏನೂ ಮಾಡಿಲ್ಲ ಹೇಳುತ್ತಾ, ವಿಶ್ವದಲ್ಲೇ ಭಾರತ ಮುಂಚೂಣಿ ದೇಶವಾಗಲು ಬೆವರು, ರಕ್ತ ಹರಿಸಿ ದುಡಿದ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರು ಬಡವರು, ಮಹಿಳೆಯರು, ಹಿಂದುಳಿದವರನ್ನು ಅಪಮಾನಿಸುತ್ತಿದ್ದಾರೆ ಎಂದು ದೂರಿದರು.

ವಿಶ್ವದಲ್ಲಿ ದೇಶ, ಅತ್ಯುತ್ತಮ ಸಾಧನೆ ಮಾಡಲು ಕೇವಲ 3-4ವರ್ಷಗಳ ಸಾಧನೆ ಕಾರಣವಲ್ಲ. ಕಳೆದ ದೇಶದ ಜನತೆಯ 70 ವರ್ಷಗಳ ನಿರಂತರ ಪರಿಶ್ರಮ ಕಾರಣ ಎಂದ ಅವರು, ಕೇವಲ ಒಬ್ಬ ವ್ಯಕ್ತಿಯಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ದೇಶದ 125 ಕೋಟಿ ಜನರ ಶ್ರಮವೂ ಇದರಲ್ಲಿದೆ. ದೇಶದ ದುಡಿಯುವ ಜನರ ದುಡಿಮೆಯನ್ನು ಮೋದಿ ವಿದೇಶಗಳಲ್ಲಿ ಅಪಮಾನಿಸುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯೀಕರಣ ಮಾಡಿರುವುದು ಶ್ರೀಮಂತರ ಕಪ್ಪು ಹಣವನ್ನು ಬಿಳಿಯನ್ನಾಗಿಸಲು ಮಾತ್ರ. ಇದರಿಂದ ಶ್ರೀಮಂತರು, ಕಪ್ಪುಹಣ ಉಳ್ಳವರು, ಭ್ರಷ್ಟಾಚಾರಿಗಳು, ಭಯೋತ್ಪಾದಕರಿಗೆ ಯಾವುದೇ ಸಮಸ್ಯೆಯಾಗದೇ, ಕೇವಲ ಬಡವರಿಗೆ, ಮಹಿಳೆಯರಿಗೆ ತೊಂದರೆಯಾಯಿತು. ಅವರು ಸಮಸ್ಯೆಗಳನ್ನು ಎದುರಿಸಿದರು ಎಂದರು.

ಕೇಂದ್ರದಲ್ಲಿರುವುದು ಯು-ಟರ್ನ್ ಸರಕಾರ. ಮೋದಿ ಸುಳ್ಳಿನ ಸರದಾರರು. ಮತ ವಿಭಜನೆ, ಜಾತಿ-ಜಾತಿ, ಧರ್ಮ-ಧರ್ಮಗಳನ್ನು ಒಡೆದು ದೇಶವನ್ನು ವಿಷಮಯಗೊಳಿಸಲು ಪ್ರಯತ್ನಿಸುತ್ತಿರುವ ಪಕ್ಷ ಬಿಜೆಪಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೆಸ್ಸೆಸ್, ಬಜರಂಗದಳ, ವಿಎಚ್‌ಪಿ ಕೋಮುವಾದ ಪ್ರಯೋಗಳನ್ನು ಕರಾವಳಿಯಲ್ಲಿ ಮಾಡಿಕೊಂಡು ಬಂದಿದೆ. ರಾಜಕೀಯ ಪ್ರಜ್ಞೆ ಇರುವವರು ಬಿಜೆಪಿಯ ಈ ಕುಟೀಲತನವನ್ನು ಅರ್ಥಮಾಡಿಕೊಳ್ಳಬಲ್ಲರು. 2013ರಲ್ಲಿ ನಮ್ಮನ್ನು ಬಹುಮತದಿಂದ ಆಯ್ಕೆ ಮಾಡಿದ್ದೀರಿ. ನಾವು ನಿಮಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿ, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ಒಳ್ಳೆಯ ಆಡಳಿತ ನೀಡಿದ್ದೇವೆ. ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಇರುವಂತೆ ನೋಡಿಕೊಂಡಿದ್ದೇವೆ. ಇದು ಬಿಜೆಪಿಯಿಂದ ಖಂಡಿತ ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ಜನತೆ ನಮಗೆ ಮತ್ತೊಮ್ಮೆ ಆಶೀರ್ವದಿಸುವರೆಂಬ ಪೂರ್ಣ ವಿಶ್ವಾಸ ನಮಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಸ್.ಆರ್.ಪಾಟೀಲ್, ಡಿ.ಕೆ.ಶಿವಕುಮಾರ್, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ವೇಣುಗೋಪಾಲ್, ವಿಷ್ಣುದಾಸ್ ಉಪಸ್ಥಿತರಿದ್ದರು.

ಕಾಪು ಶಾಸಕ ವಿನಯಕುಮಾರ್ ಸೊರಕೆ ಸ್ವಾಗತಿಸಿ, ಬ್ಲಾಕ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ವಂದಿಸಿದರು.ಎಂ.ಎ.ಗಫೂರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News