ಮಣಿಪಾಲ: ಹೊತ್ತಿ ಉರಿದ ಹಾರ್ಡ್ ವೇರ್ ಶಾಪ್; ಲಕ್ಷಾಂತರ ರೂ. ನಷ್ಟ

Update: 2018-03-20 16:02 GMT

ಮಣಿಪಾಲ, ಮಾ.20: ಇಲ್ಲಿನ ಈಶ್ವರನಗರದ ಸಪ್ತಮಿ ಕಾಂಪ್ಲೆಕ್ಸ್‌ಲ್ಲಿರುವ ಹಾರ್ಡ್‌ವೇರ್ ಅಂಗಡಿಯೊಂದರಲ್ಲಿ ಇಂದು ಬೆಳಗ್ಗೆ 11:15ರ ಸುಮಾರಿಗೆ ಸಂಭವಿಸಿದ ಬೆಂಕಿ ಅನಾಹುತದಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾಗಿರುವ ಬಗ್ಗೆ ವರದಿಯಾಗಿದೆ.

ಸತೀಶ್ ನಾಯಕ್ ಎಂಬವರ ಶರಣ್ ಹಾರ್ಡ್‌ವೇರ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯುಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ಪೈಂಟ್ ಹಾಗೂ ಕೆಮಿಕಲ್‌ಗಳಿಂದ ಬೆಂಕಿಯು ವಿಸ್ತಾರಗೊಂಡು ಇಡೀ ಅಂಗಡಿಯನ್ನು ವ್ಯಾಪಿಸಿತು.

ಈ ವೇಳೆ ಅಂಗಡಿಯೊಳಗೆ ಮಾಲಕ ಸತೀಶ್ ನಾಯಕ್ ಸೇರಿದಂತೆ ನಾಲ್ಕು ಮಂದಿ ಕೆಲಸ ಮಾಡಿಕೊಂಡಿದ್ದು, ಬೆಂಕಿ ಕಾಣಿಸಿಕೊಂಡ ಕೂಡಲೇ ಅವರೆಲ್ಲರು ಹೊರಗಡೆ ಓಡಿ ಬಂದರು. ನಂತರ ಬೆಂಕಿಯು ಅಂಗಡಿಯ ಎರಡು ಕೋಣೆಯಲ್ಲೂ ವ್ಯಾಪಿಸಿ ಇಡೀ ಪರಿಸರ ಹೊಗೆಮಯವಾಯಿತು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಉಡುಪಿಯ ಎರಡು, ಕಾರ್ಕಳ ಮತ್ತು ಮಲ್ಪೆಯ ತಲಾ ಒಂದು ವಾಹನ ಮತ್ತು 25ಮಂದಿ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಅಗ್ನಿಶಾಮಕದಳದ ಸಿಬ್ಬಂದಿಗಳು ಈ ಕಾರ್ಯಾಚರಣೆಯನ್ನು ಬೆಳಗ್ಗೆ 11:30ಕ್ಕೆ ಆರಂಭಿಸಿದ್ದು, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಈ ಬೆಂಕಿ ಅವಘಡದಿಂದ ಅಂಗಡಿಯೊಳಗಿದ್ದ ಕಂಪ್ಯೂಟರ್, ಬೆಳಗ್ಗೆ ವ್ಯವಹಾರ ನಡೆಸಿದ ನಗದು, ಪೈಂಟ್, ಕೆಮಿಕಲ್, ಹಾರ್ಡ್‌ವೆರ್ ಸೊತ್ತುಗಳು ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದ ಸುಮಾರು 25ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮಾಲಕ ಸತೀಶ್ ನಾಯಕ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News