ಹೊನ್ನಾವರ : ಎಸ್.ಡಿ.ಎಂ. ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ವಾರ್ಷಿಕ ಸ್ನೇಹ ಸಮ್ಮೇಳನ

Update: 2018-03-21 06:31 GMT

ಹೊನ್ನಾವರ,ಮಾ.21: ನಮ್ಮೆಲ್ಲರ ಮತ್ತು ನಮ್ಮ ಮಕ್ಕಳ ಮುಂದಿನ ಭವಿಷ್ಯ ಚೆನ್ನಾಗಿರಬೇಕೆಂದರೆ ಈ ನಮ್ಮ ಪ್ರಕೃತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕಾಗಿದೆ ಎಂದು ಧಾರವಾಡದ ಪೀಪಲ್ ಫಸ್ಟ್ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಡಾ. ಪ್ರಕಾಶ ಭಟ್ಟ ಹೇಳಿದರು. 

ಇಲ್ಲಿನ ಎಸ್.ಡಿ.ಎಂ. ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿದರು. ಜೀವನ ಸುಂದರವಾಗಿದೆ ಎನ್ನುವುದು ಭ್ರಮೆಯಾಗಿದೆ ಈಗ, ಜೀವನ ಬಹಳ ಕಷ್ಟವಿದೆ. ಹೆಚ್ಚು ಇಳುವರಿಗಾಗಿ ರಾಸಾಯನಿಕಗಳನ್ನು ಸುರಿದು ಮಣ್ಣನ್ನು ಹಾಳು ಮಾಡುತ್ತಿದ್ದೇವೆ. ಹಾಲು ವಿಷವಾಗುತ್ತಿದೆ. ಇವತ್ತು ಹುಟ್ಟಿದ ಮಗುವಿಗೆ ವಿಷವುಣಿಸುತ್ತಿದ್ದೇವೆ ನಾವು. ಭೂಮಿಗೆ ತಮ್ಮ ತಮ್ಮ ಸ್ಥಳದಲ್ಲಿ ಚೆನ್ನಾಗಿ ಬದುಕುವ ಜನಬೇಕು. ಉತ್ತಮ ಕಾರ್ಯಗಳ ಮೂಲಕ ಬದುಕನ್ನು ಹಣವಿಲ್ಲದೆ ಶ್ರೀಮಂತಿಕೆಯನ್ನು ಸಾಧಿಸಬೇಕು. ಹೊಸದನ್ನು ಕಲಿಯುವ, ಬುದ್ದಿಯನ್ನು ಆಕ್ಟಿವ್ ಆಗಿ ಇಡುವ ಕೆಲಸ ಬೇಕಾಗಿದೆ ಎಂದರು.

ದಕ್ಷಿಣ-ಪಶ್ಚಿಮ ರೈಲ್ವೇ ವಲಯದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಕಾರ್ತಿಕ ಹೆಗಡೆಕಟ್ಟಿ ಮಾತನಾಡಿ ಜೀವನದಲ್ಲಿ ನಿಶ್ಚಿತ ಗುರಿಯನ್ನು ಹೊಂದಿರಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿನ ಗುಟ್ಟನ್ನು ಅರಿತು ಮುನ್ನಡಿಯಿಡಬೇಕು. ಕಾಲ್ಪನಿಕ ಹೆದರಿಕೆ ಮತ್ತು ಕೀಳರಿಮೆಯಿಂದ ನಿರಾಶೆಗೊಳ್ಳಬಾರದು. ನಮ್ಮ ತಪ್ಪುಗಳನ್ನು ಅರಿತು ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಎಸ್.ಎಸ್.ಹೆಗಡೆ ಮಾತನಾಡಿ, ಮಹನೀಯರ ಬದುಕಿನ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದು ಹೇಳಿದರು.

ಕಾಲೇಜಿನ 'ಶರಾವತಿ' ವಾರ್ಷಿಕ ಸಂಚಿಕೆ, 'ಎಟೊಮ್' ವಿಜ್ಞಾನ ನಿಯತಕಾಲಿಕೆ, 'ದೀಪಿಕಾ' ವಿದ್ಯಾರ್ಥಿ ಕೈಬರಹ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಬಿಡುಗಡೆಗೊಂಡ ವಾರ್ಷಿಕ ಸಂಚಿಕೆಗಳ ಕುರಿತು ಪ್ರಾಧ್ಯಾಪಕ ವಿ.ಎಂ.ಭಂಡಾರಿ, ಪ್ರೊ. ಪಿ.ಎಂ.ಹೊನ್ನಾವರ ಮಾತನಾಡಿದರು. 

ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ರಾಘವೇಂದ್ರ ನಾಯ್ಕ, ಪೈಜಲ್ ಶೇಖ್, ಎಂ.ಎಚ್.ಶಿವಮೂರ್ತಿ, ವಿನೋದ ನಾಯ್ಕ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಆರ್.ವಿ.ಹೆಗಡೆ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಪ್ರೊ. ನಾಗರಾಜ ಅಪಗಾಲ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. .ಎಸ್.ಭಟ್ಟ, ಡಾ.ರೇಣುಕಾದೇವಿ ಗೋಳಿಕಟ್ಟೆ, ಪ್ರೊ. ಆರ್.ಕೆ.ಮೇಸ್ತ ವಿವಿಧ ವಿಭಾಗಗಳ ವರದಿ ವಾಚಿಸಿದರು. 

ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಕಾಲೇಜಿನ ಸಂಗೀತ ವಿಭಾಗದ ಪ್ರಾಧ್ಯಾಪಕ ಡಾ. ಅಶೋಕ ಹುಗ್ಗಣ್ಣವರ್ ಅವರನ್ನು ಸನ್ಮಾನಿಸಲಾಯಿತು. ದತ್ತಿನಿಧಿ ಪ್ರಶಸ್ತಿ ಪುರಸ್ಕೃತರಿಗೆ, ವಿದ್ಯಾರ್ಥಿ ಒಕ್ಕೂಟದ ಸಾಂಸ್ಕೃತಿಕ ಸ್ಪರ್ಧೆ, ಕ್ರೀಡಾ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಹಾಗೂ ಎನ್‍ಸಿಸಿ ವಿಶೇಷ ಸಾಧಕರಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News