ಬೀಫ್ ಸಾಗಾಟದ ಆರೋಪದಲ್ಲಿ ವ್ಯಾಪಾರಿಯ ಹತ್ಯೆ ಪ್ರಕರಣ: 11 ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ
ಜಾರ್ಖಂಡ್, ಮಾ.21: ಬೀಫ್ ಸಾಗಿಸುತ್ತಿದ್ದ ಆರೋಪದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಹತ್ಯೆಗೈದ ಬಿಜೆಪಿ ನಾಯಕ ಸೇರಿದಂತೆ 11 ಮಂದಿ ಗೋರಕ್ಷಕರಿಗೆ ಜಾರ್ಖಂಡ್ ನ ರಾಮ್ ಗರ್ ಜಿಲ್ಲೆಯ ತ್ವರಿತಗತಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬಾಲಾಪರಾಧಿಯಾಗಿರುವ ಒಬ್ಬನ ಬಗ್ಗೆ ಇನ್ನಷ್ಟೇ ತೀರ್ಪು ಪ್ರಕಟಿಸಬೇಕಾಗಿದೆ.
ಅಲೀಮುದ್ದೀನ್ ಅನ್ಸಾರಿ ಎಂಬ 55 ವರ್ಷದ ವ್ಯಾಪಾರಿಯನ್ನು ಈ ಗೋರಕ್ಷಕರು ಹೊಡೆದು ಕೊಂದಿದ್ದರು. ಸಂತೋಷ್ ಸಿಂಗ್, ದೀಪಕ್ ಮಿಶ್ರಾ, ವಿಕ್ಕಿ ಸಾ, ಸಿಕಂದರ್ ರಾಮ್, ಉತ್ತಮ್ ರಾಮ್, ವಿಕ್ರಮ್ ಪ್ರಸಾದ್, ರಾಜು ಕುಮಾರ್, ರೋಹಿತ್ ಠಾಕೂರ್, ಛೋಟು ವರ್ಮಾ, ಕಪಿಲ್ ಠಾಕೂರ್ ಹಾಗು ಬಿಜೆಪಿ ನಾಯಕ ನಿತ್ಯಾನಂದ ಮಹ್ತೋ ಅಪರಾಧಿಗಳು.
ಗೋರಕ್ಷಣೆ ಹೆಸರಿನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗುತ್ತಿರುವ ಪ್ರಥಮ ಪ್ರಕರಣ ಇದಾಗಿದೆ ಎಂದು ಅಡಿಶನಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಸುಶೀಲ್ ಕುಮಾರ್ ಶುಕ್ಲಾ ಹೇಳಿದರು.
2017ರ ಜೂನ್ 29ರಂದು ರಾಮ್ ಗರ್ ನ ಬಝಾರ್ಟಂಡ್ ನಲ್ಲಿ ಬಜರಂಗದಳ ಕಾರ್ಯಕರ್ತರನ್ನೊಳಗೊಂಡ 100ಕ್ಕೂ ಅಧಿಕ ಮಂದಿಯ ತಂಡ ಅನ್ಸಾರಿಯವರನ್ನು ಹೊಡೆದು ಕೊಂದಿದ್ದರು.
“ದುಷ್ಕರ್ಮಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ನಾವು ದೇವರಲ್ಲಿ ಬೇಡಿಕೊಂಡಿದ್ದೆವು. ಇದೀಗ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪು ಸ್ವಾಗತಾರ್ಹ. ಆದರೆ 12ನೇ ಆರೋಪಿ ಅಪ್ರಾಪ್ತನಾಗಿರುವ ಕಾರಣ ಶಿಕ್ಷೆ ಪ್ರಕಟವಾಗಿಲ್ಲ. ಆತನನ್ನೂ ವಯಸ್ಕ ಎಂದೇ ಪರಿಗಣಿಸಬೇಕು” ಎಂದು ಹೆಚ್ಚುವರಿ ಪಬ್ಲಿಕ್ ಸಾಲಿಸಿಟರ್ ಸುಶೀಲ್ ಕುಮಾರ್ ಶುಕ್ಲ ಹೇಳಿದ್ದಾರೆ. ಕೋರ್ಟ್ ನೀಡಿದ ತೀರ್ಪಿನಿಂದ ತನ್ನ ತಾಯಿಗೆ ಖುಷಿಯಾಗಿದೆ ಎಂದು ಅನ್ಸಾರಿ ಪುತ್ರಿ ಶಾಬಾನ್ ಅನ್ಸಾರಿ ತಿಳಿಸಿದ್ದಾರೆ. ಆದರೆ ಸರಕಾರ ತನ್ನ ಕುಟುಂಬಕ್ಕೆ ಪರಿಹಾರ ಧನ ನೀಡದಿರುವ ಬಗ್ಗೆ ಅತೃಪ್ತಿಯಿದೆ. ತಂದೆಯ ದುಡಿಮೆಯಿಂದ ಸಂಸಾರದ ರಥ ಸಾಗುತ್ತಿತ್ತು. ದುರಂತ ಸಂಭವಿಸಿದ ಆರಂಭದ ದಿನದಲ್ಲಿ ಹಲವಾರು ಅಧಿಕಾರಿಗಳು, ಮುಖಂಡರು ಮನೆಗೆ ಭೇಟಿ ನೀಡಿ ಹಲವಾರು ಆಶ್ವಾಸನೆ ನೀಡಿ ಹೋಗಿದ್ದಾರೆ. ಆದರೆ ಇದುವರೆಗೂ ಪರಿಹಾರಧನದ ಸುದ್ದಿಯಿಲ್ಲ ಎಂದು ಶಾಬಾನ್ ಹೇಳಿದ್ದಾರೆ.
ಅಪರಾಧಿಗಳಲ್ಲಿ ಓರ್ವನಾಗಿರುವ ನಿತ್ಯಾನಂದ ಮಹತೋ ಬಿಜೆಪಿಯ ಜಿಲ್ಲಾ ಘಟಕದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ವರದಿಯಾಗಿದೆ.