ಅಂಟಾರ್ಟಿಕಾದ 95 ದಿನಗಳ ಅನುಭವ ‘ಅವಿಸ್ಮರಣೀಯ’: ಪ್ರೊ. ಬಾಲಕೃಷ್ಣ

Update: 2018-03-21 16:00 GMT

ಉಡುಪಿ, ಮಾ.21: ಭೂಮಿಯ ದಕ್ಷಿಣ ತುದಿಯಾದ ಅಂಟಾರ್ಟಿಕಾ (ದಕ್ಷಿಣ ಧ್ರುವ)ದ ಭಾರತೀಯ ಸಂಶೋಧನಾ ಕೇಂದ್ರವಾದ ಭಾರತಿ ಮತ್ತು ಮೈತ್ರಿಯಲ್ಲಿ ಕಳೆದ 95 ದಿನಗಳ ಅನುಭವ ನನ್ನ ಜೀವನದ ಮರೆಯಲಾಗದ ಹಾಗೂ ಅವಿಸ್ಮರಣೀಯ ಅನುಭವವಾಗಿದೆ ಎಂದು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ. ಕೆ.ಬಾಲಕೃಷ್ಣ ಬಣ್ಣಿಸಿದ್ದಾರೆ.

ಭಾರತದ 40 ಇತರ ವಿಜ್ಞಾನಿಗಳೊಂದಿಗೆ 37ನೇ ಭಾರತೀಯ ವೈಜ್ಞಾನಿಕ ದಂಡಯಾತ್ರೆ ತಂಡದ ಸದಸ್ಯರಾಗಿ ಡಾ. ಬಾಲಕೃಷ್ಣ ಅಂಟಾರ್ಟಿಕಾಕ್ಕೆ ತೆರಳಿದ್ದರು.

ಈ ತಂಡದಲ್ಲಿ ಭಾರತದ ಇಸ್ರೋ, ಐಎಂಡಿ, ಜಿಎಸ್‌ಐ, ಐಐಜಿ, ಬಾರ್ಸ್, ಬಿಎಸ್‌ಐ, ಎನ್‌ಸಿಎಒಆರ್‌ಗಳ ವಿಜ್ಞಾನಿಗಳಲ್ಲದೇ, ಭೂಸೇನೆ ಹಾಗೂ ಗಡಿ ರಸ್ತೆ ಸಂಘಟನೆಗಳ ಪರಿಣಿತ ತಜ್ಞರು ಅಂಟಾರ್ಟಿಕಾಕ್ಕೆ ತೆರಳಿದ್ದರು.

ದಕ್ಷಿಣ ಧ್ರುವಕ್ಕೆ ತೆರಳಿದ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಡೀಮ್ಡ್ ಖಾಸಗಿ ವಿವಿಯ ಏಕೈಕ ವಿಜ್ಞಾನಿ ಇವರಾಗಿದ್ದರೂ. ಗೋವಾ ಮೂಲಕ ಭೂ ವಿಜ್ಞಾನ ಸಚಿವಾಲಯದ ಸಂಶೋದನಾ ಸಂಸ್ಥೆಯಾದ ನೇಷನಲ್ ಸೆಂಟರ್ ಫಾರ್ ಅಂಟಾರ್ಟಿಕಾ ಆ್ಯಂಡ್ ಓಷಿಯನ್ ರಿಸರ್ಚ್ (ಎನ್‌ಸಿಎಓಆರ್) ಈ ಯಾತ್ರೆಯನ್ನು ಸಂಯೋಜಿಸಿತ್ತು.

ಈ ವಿಜ್ಞಾನ ದಂಡಯಾತ್ರೆಗೆ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ಅತ್ಯಂತ ಕಠಿಣವಾಗಿತ್ತು. ಇದರಲ್ಲಿ ನಮ್ಮ ಸಂಶೋಧನಾ ಸಾಮರ್ಥ್ಯದೊಂದಿಗೆ ಎರಡು ವಾರಗಳ ಸಂಪೂರ್ಣ ಹಿಮದ ನಡುವೆ ನಮ್ಮ ದೈಹಿಕ ಸಾಮರ್ಥ್ಯ ಹಾಗೂ ಕ್ಷಮತೆಯನ್ನೂ ಪರೀಕ್ಷೆಗೊಳಪಡಿಸಲಾಗಿತ್ತು. ಇದಕ್ಕಾಗಿ ಉತ್ತರ ಖಂಡದ ಅವ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್‌ನಲ್ಲಿ ಪರ್ವತಾರೋಹಣ, ಟ್ರಕ್ಕಿಂಗ್ ಮತ್ತು ಸ್ಕಿಯಿಂಗ್‌ನಲ್ಲಿ ತರಬೇತಿ ಯನ್ನು ಆಯೋಜಿಸಲಾಗಿತ್ತು. ಇಲ್ಲಿ ಹಿಮಕ್ಕೆ ಹೊಂದಿಕೊಳ್ಳಲು ಬೇಕಾದ ತರಬೇತಿ ನೀಡಲಾಗಿತ್ತು ಎಂದರು.

ದಕ್ಷಿಣ ಧ್ರುವದಲ್ಲಿ ಪಡೆದ ಮೂರು ತಿಂಗಳ ಅನುಭವವನ್ನು ‘ರೋಮಾಂಚಕಾರಿ’ ಎಂದು ಬಣ್ಣಿಸಿದ ಡಾ.ಬಾಲಕೃಷ್ಣ, ಇವುಗಳು ಜೀವನ ಪರ್ಯಂತ ಮರೆಯಲಾರದ ಅನುಭವಗಳಾಗಿವೆ ಹಾಗೂ ಸದಾ ಚಿರಸ್ಮರಣೀಯವೆನಿಸಿಕೊಂಡಿವೆ ಎಂದರು.

‘ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿಯೂ ಈ ಅನುಭವಗಳು ಅತ್ಯಂತ ಅಮೂಲ್ಯವಾದುವು ಎಂದು ನಾನು ಭಾವಿಸುತ್ತೇನೆ. ಮೈನಸ್ 10 ಡಿಗ್ರಿ ಸೆಲ್ಶಿಯಸ್ ಉಷ್ಣತಾಮಾನಕ್ಕೆ ಹೊಂದಿಕೊಳ್ಳಲು ಮೊದಲು ತುಂಬಾ ಕಷ್ಟವಾಯಿತು. ಅಲ್ಲಿ ರಾತ್ರಿಯೇ ಇರಲಿಲ್ಲ. ಹಾಗೂ ಆಹಾರಗಳೆಲ್ಲಾ ಹಿಮಗಟ್ಟಿದ್ದವು. ಆದರೆ ನಾನು ಅತ್ಯಂತ ತ್ವರಿತಗತಿಯಲ್ಲಿ ಆ ವಾತಾವರಣಕ್ಕೆ ಹೊಂದಿಕೊಂಡು ಬಿಟ್ಟೆ’ ಎಂದವರು ವಿವರಿಸಿದರು.

ಹೀಗಾಗಿ ನನ್ನ ಪಾಲಿನ ಸಂಶೋಧನೆಯನ್ನು ಬೇಗನೇ ಪ್ರಾರಂಭಿಸಲು ಸಾಧ್ಯವಾಯಿತು. ಸಮುದ್ರ ನೀರಿನಲ್ಲಿ, ಸಮುದ್ರದ ಹಿಮದಲ್ಲಿ ಹಾಗೂ ಆ ಪ್ರದೇಶದ ಮಣ್ಣಿನಲ್ಲಿ ಫಾರ್ಮಸ್ಯೂಟಿಕಲ್ಸ್, ನಿತ್ಯ ಬಳಕೆಯ ವಸ್ತುಗಳ ಸೂಕ್ಷ್ಮಕಣ ಮಾಲಿನ್ಯದ ಪರಿಣಾಮಗಳ ಕುರಿತು ಅಧ್ಯಯನವನ್ನು ನಾನು ಮಾಡಬೇಕಿತ್ತು ಎಂದರು.

ಭಾರತಿ ಸ್ಟೇಶನ್ ಆಸುಪಾಸಿನ 20ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ 100 ಮಾದರಿಗಳನ್ನು ತಾನು ಸಂಗ್ರಹಿಸಿದ್ದಾಗಿ ಬಾಲಕೃಷ್ಣ ತಿಳಿಸಿದರು. ಈ ಮಾದರಿಗಳನ್ನು ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸಾಯನ್ಸ್‌ನಲ್ಲಿ ವಿಶ್ಲೇಷಣೆ ಹಾಗೂ ಅಧ್ಯಯನಕ್ಕೊಳಪಡಿಸುವುದಾಗಿ ಅವರು ತಿಳಿಸಿದರು. ಪ್ರೊ.ಕೃಷ್ಣಮೂರ್ತಿ ಭಟ್ ಇವರ ಸಹ ಸಂಶೋಧಕರಾಗಿದ್ದರು. ಹಿಮದ ಮೇಲೆ ಚಲಿಸುವ ಸ್ಕಿಡೂ (ಸ್ನೋ ಸ್ಕೂಟರ್) ಹಾಗೂ ಹೆಲಿಕಾಫ್ಟರ್‌ಗಳಲ್ಲಿ ತಾವು ಮಾದರಿಗಳ ಸಂಗ್ರಹಕ್ಕೆ ತೆರಳುತಿದ್ದುದಾಗಿ ಅವರು ನುಡಿದರು.

ಭಾರತಿ ಸ್ಟೇಶನ್‌ನಲ್ಲಿ ದಿನದ 24 ಗಂಟೆಯೂ ನಿರಂತರ ಇಂಟರ್‌ನೆಟ್ ಸಂಪರ್ಕ, ಆರಾಮದಾಯಕವಾದ ರೂಮ್‌ಗಳು, ಸಹನೀಯ ಉಷ್ಣತೆ, ಉತ್ತಮ ಗ್ರಂಥಾಲಯ ಸೌಲಭ್ಯ, ಭಾರತೀಯ ಆಹಾರಗಳು ಲಭ್ಯವಿತ್ತು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News